ಜಿಲ್ಲೆ

ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ

ಪಾಂಡವಪುರ: ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ಯುವಕನ ಅಂಗಾಂಗಗಳನ್ನು ಮೃತನ ಕುಟುಂಬ ವರ್ಗದವರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


ತಾಲೂಕಿನ ಇಂಗಲಗುಪ್ಪೆ ಗ್ರಾಮದ ಅಶೋಕ್ ಎಂಬುವರ ಪುತ್ರ ಪ್ರಜ್ವಲ್ (21) ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ಇತ್ತೀಚೆಗೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಮಿದುಳು ನಿಷ್ಕ್ರಿಯವಾಗಿದ್ದು ಬದುಕುಳಿಯುವ ಸಾಧ್ಯತೆ ಇಲ್ಲ ಎಂಬುದನ್ನು ಕುಟುಂಬದವರಿಗೆ ತಿಳಿಸಿದ್ದರು. ಹೀಗಾಗಿ ಕುಟುಂಬದವರು ಅಂಗಾಂಗಗಳನ್ನು ದಾನ ಮಾಡುವ ತೀರ್ಮಾನ ಕೈಗೊಳ್ಳುವ ಮೂಲಕ ಮಾನವೀಯತೆ ತೋರಿದ್ದರು. ಶುಕ್ರವಾರ ಪ್ರಜ್ವಲ್ ಮೃತಪಟ್ಟರು. ಶನಿವಾರ ಸ್ವಗ್ರಾಮ ಇಂಗಲಗುಪ್ಪೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತನ ಅಂಗಾಂಗಗಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾನ ಮಾಡಲಾಗಿದೆ. ಕುಟುಂಬದವರು ಮಾನವೀಯತೆ ತೋರಿದ್ದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.