ಚಿಕ್ಕೋಡಿ ಗ್ರಾಮೀಣ: ಸನಾತನ ಹಿಂದು ಧರ್ಮದ ಭಗವದ್ಗೀತೆ, ರಾಮಾಯಣ ಬಗ್ಗೆ ಮಕ್ಕಳಿಗೆ ತಿಳಿಸಬೇಕಿದೆ ಎಂದು ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಹೇಳಿದರು.
ಚಿಕ್ಕೋಡಿ ಪಟ್ಟಣದ ಆರ್.ಡಿ.ಹೈಸ್ಕೂಲ್ ಆವರಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಿಗಳ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುಗಯುಗಗಳಿಂದ ಐತಿಹಾಸಿಕ ಹಿನ್ನೆಲೆಯುಳ್ಳ ಹಿಂದು ಧರ್ಮ ಯಾರ ಮೇಲೂ ಆಕ್ರಮಣ ಮಾಡದೆ, ಉತ್ತಮ ಸಂಸ್ಕಾರದಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಇಂದಿನ ದಿನಗಳಲ್ಲಿ ಹಿಂದುಗಳು ಎಚ್ಚರಗೊಂಡು, ಯುವಕ, ಯುವತಿಯರು ಮುಂದೆ ಬಂದು ಹಿಂದು ಧರ್ಮದ ಸಂಸ್ಕಾರ ಬೋಧಿಸಬೇಕಿದೆ ಎಂದರು. ಉತ್ತರ ಕರ್ನಾಟಕದ ಸುಮಾರು 40 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಸಾಗುವುದು ಒಂದು ಕಡೆಯಾದರೆ, ದಕ್ಷಿಣದಲ್ಲಿ ದತ್ತ ಮಾಲೆ ಈ ಎರಡು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮವನ್ನು ಬಜರಂಗದಳ ಮಾಡುತ್ತ ಬಂದಿದೆ ಎಂದರು. ಗದಗದ ಸದಾಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಬಜರಂಗದಳ ಭಾರತದಲ್ಲಿ ಧರ್ಮ ರಕ್ಷಕರ ಪಡೆ ನಿರ್ಮಾಣ ಮಾಡುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚರಮೂರ್ತಿ ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಜರಂಗದಳ ಪ್ರಮುಖರಾದ ಆರ್.ಕೆ.ಬಾಗಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿಠ್ಠಲ ಮಾಳಿ, ಚಿಕ್ಕೋಡಿ ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ವಿಜಯ ಕೋಠೆವಾಲೆ, ಅಜಯ ಕವಟಗಿಮಠ, ಶರತ ಕವಟಗಿಮಠ, ರಾಜೇಶ ನೇರ್ಲಿ, ಅಶೋಕ ಹರಗಾಪುರೆ, ಆರ್.ಐ.ಖೋತ, ಸಂಜಯ ಅರಗೆ, ಸಂಜಯ ಪಾಟೀಲ ಇತರರಿದ್ದರು.