ಚಿತ್ರದುರ್ಗ: ನಗರದ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನಗರದ ಬಟ್ಟೆ ಅಂಗಡಿಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಅನ್ಯ ಕೋಮಿನ ಯುವತಿಗೆ ಬೈಕ್‌ಲ್ಲಿ ಡ್ರಾಪ್ ಕೊಟ್ಟ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ಜಿಹಾದಿ ಮಾನಸಿಕತೆ ಮಿತಿಮೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲವ್‌ಜಿಹಾದ್ ಬಲೆಗೆ ಬೀಳಲಿಲ್ಲ ಎಂಬ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಹಿಂದು ಯುವತಿಯನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಯುವಕನ ಮೇಲೆ ಹಲ್ಲೆಗೈದಿರುವ ಆರೋಪಿಗಳನ್ನು 2 ದಿನದೊಳಗೆ ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಗರದ ಶ್ರೀರಾಮಂದಿರದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾನಿರತರು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ‌್ಯದರ್ಶಿ ರುದ್ರೇಶ್, ಭಜರಂಗ ದಳದ ಕರ್ನಾಟಕ ದಕ್ಷಿಣದ ಪ್ರಾಂತ ಸಯೋಜಕ ಪ್ರಭಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ಎಂ.ಸಿ.ರಘುಚಂದನ್, ಕುಡಾ ಮಾಜಿ ಅಧ್ಯಕ್ಷ ಬದ್ರಿನಾಥ್, ಟೈಗರ್‌ತಿಪ್ಪೇಸ್ವಾಮಿ, ವಿಠ್ಠಲ್, ಡೇರಿ ಸೀನಣ್ಣ, ಶ್ರೀನಿವಾಸ್, ಕೇಶವ್, ಸಂದೀಪ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
*ಆಕ್ರೋಶ: ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ವಿರುದ್ಧ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹತ್ಯೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಸಂಸ್ಥೆ ಕಾರ‌್ಯದರ್ಶಿ ಎಸ್.ಷಡಕ್ಷರಯ್ಯ ತಿಳಿಸಿದ್ದಾರೆ.