ಜಿಲ್ಲೆ

ಯುವ ಸ್ಪಂದನ ಅರಿವು ಅಗತ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಲಹೆ, ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ

ಬೆಂಗಳೂರು ಗ್ರಾಮಾಂತರ: ಯುವ ಸ್ಪಂದನ ಕಾರ್ಯಕ್ರಮದಡಿ ಶಾಲಾ-ಕಾಲೇಜುಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶ ಯುವಜನರಿಗೂ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಅಗತ್ಯವಿರುವವರಿಗೆ ಸಮಾಲೋಚನೆ ನಡೆಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿದ್ದ ಯುವ ಯುವಸ್ಪಂದನ ಯೋಜನೆಯ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ ಹಾಗೂ ರಾಜ್ಯ ಯುವ ನೀತಿ 2021ರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗದ ಕುರಿತು ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಅಗತ್ಯ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದರು.

ಈ ಯೋಜನೆಯಡಿ ಆಯೋಜಿಸಲಾಗುವ ಕಾರ್ಯಕ್ರಮಗಳ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಪತ್ರಿಕೆ, ವೆಬ್‌ಸೈಟ್‌ನಲ್ಲಿ ದಾಖಲಿಸುವ ಮೂಲಕ ಹೆಚ್ಚಿನ ಪ್ರಚಾರಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಮನವೊಲಿಸುವ ಕೆಲಸವಾಗಬೇಕು: ಕಾರಾಣಾಂತರಗಳಿಂದ ಓದುವುದನ್ನು ಸ್ಥಗಿತಗೊಳಿಸಿರುವ, ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ವಿವಿಧ ವೃತ್ತಿಯಲ್ಲಿ ತೊಡಗಿರುವ ಯುವಜನತೆಯ ಮನಸ್ಥಿತಿ ಸುಧಾರಿಸಿ, ಶಿಕ್ಷಣ ಮುಂದುವರಿಸಲು ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಯುವ ನೀತಿ ಪರಿಷ್ಕರಣೆ: 2012ರಲ್ಲಿ ಜಾರಿಗೆ ತಂದ ಯುವ ನೀತಿಯ ಪರಿಷ್ಕರಣೆ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಜ್ಯ ಸಮಿತಿಗೆ ನೀಡಲಾಗುವ ವರದಿ ಹೆಚ್ಚು ರಚನಾತ್ಮಕವಾಗಿರಬೇಕು. ಯುವ ನೀತಿಯೊಂದಿಗೆ ಉತ್ತಮವಾದ ಅಂಶಗಳನ್ನು ಸೇರಿಸಿ, ಹೊಸ ರೂಪ ನೀಡುವಂತಾಗಬೇಕು ಎಂದು ತಿಳಿಸಿದರು.

ಮಹಿಳೆಯರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ಸವಾಲು ಎದುರಿಸಿದ ಯುವಜನರಿಗೂ ಸಹಕಾರವಾಗುವ ಅಂಶಗಳು ಹಾಗೂ ಉದ್ಯಮಗಳಲ್ಲಿ ಯುವಜನರು ಭಾಗವಹಿಸಲು ಸಹಕಾರಿಯಾಗುವ ನೀತಿಯನ್ನು ವರದಿ ಹೊಂದಿರಲಿ ಎಂದು ತಿಳಿಸಿದರು.

ಕನ್ನಡದಲ್ಲಿಯೂ ಇರಲಿ: ಯುವ ನೀತಿ ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲಾಮಟ್ಟದ ಶಿಫಾರಸು ವರದಿ ತಯಾರಿಕೆಗೆ ನಡೆಸಲಾಗುವ ಸಮೀಕ್ಷಾ ನಮೂನೆ ಕನ್ನಡ ಭಾಷೆಯಲ್ಲಿಯೂ ಇರಲಿ, ವರದಿಯು ಜಿಲ್ಲೆಯಲ್ಲಿನ ವಿವಿಧ ವೃತ್ತಿಯ ಯುವಜನರ ಅಭಿವೃದ್ಧಿಗೆ ಪೂರಕವಾಗಿರಲಿ ಹಾಗೂ ವಾಸ್ತವ ಅಂಶ ಹೊಂದಿರಲಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ಹೇಳಿದರು.