ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಜಾನಪದ ಕಲಾವಿದೆ ಗುರಮ್ಮ ಸಂಕೀನಮಠ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಜಗನ್ನಾಥ ವ್ಹಿ. ಚವ್ಹಾಣ, ಡಾ.ಎಸ್.ಎಸ್ ಕೋಟ್ಯಾಳ, ಪಿಯುಸಿ ವಿಭಾಗದ ಸಂಯೋಜಕಿ ಜಿ.ಎಸ್.ಶೆಲ್ಲಿಕೇರಿ ಇದ್ದರು. 
ಜಿಲ್ಲೆ

ಯುವ ಸಮುದಾಯವೇ ದೇಶದ ಶಕ್ತಿ -ಆಸ್ತಿಯಾಗಲಿ

ಬಾಗಲಕೋಟೆ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಪ್ರಜೆಗಳಾಗಿ ಈ ದೇಶದ ಶಕ್ತಿ ಮತ್ತು ಆಸ್ತಿಯಾಗಲಿ ಎಂದು ಜಾನಪದ ಕಲಾವಿದೆ ಗುರಮ್ಮ ಸಂಕೀನಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಚರಿತ್ರ‍್ಯ ಹಾಳು ಮಾಡಿಕೊಳ್ಳದೆ ಸಚಾರಿತ್ರ‍್ಯವಂತರಾಗಬೇಕು. ಹೆಣ್ಣು ಮಗಳು ದುಡಿದು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಬಲಳಾಗಬೇಕು. ಅಂದಾಗ ತನ್ನ ಕುಟುಂಬವನ್ನು ಸಂಬಾಳಿಸಲು ಸಾಧ್ಯವಾಗುತ್ತದೆ. ಕಲಿತವರೆಲ್ಲರೂ ಸರ್ಕಾರಿ ನೌಕರಿಗೆ ಆಸೆ ಮಾಡದೆ ಯಾವುದೇ ಉದ್ಯೋಗ ಮಾಡಲು ಸಿದ್ಧರಾಗಬೇಕು. ಇಂದಿನ ವಿದ್ಯಾರ್ಥಿನಿಯರು, ಯುವತಿಯರು ನೀವು ರೈತರನ್ನು ಮದುವೆಯಾಗಿ ಆ ಕುಟುಂಬಕ್ಕೆ ಗೌಡತಿಯಾಗಬೇಕು ಎಂದು ಸಲಹೆ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ವ್ಹಿ. ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ವಿಕಾಸ ಆಗಬೇಕು. ವಿಕಾರವಾಗಬಾರದು. ಮಡಿವಾಳ ಮಾಚಿದೇವ ಹಾಗೂ ಇತರ ವಚನಕಾರರನ್ನು ಸ್ಮರಿಸಿಕೊಳ್ಳುತ್ತ ಅಂದಿನ ಅನುಭವ ಮಂಟಪದಲ್ಲಿರುವ ಶರಣರು ರಚಿಸಿದ ವಚನಗಳನ್ನು ತಿಳಿಸಿದರು.

ವಿದ್ಯಾರ್ಥಿಗಳಾದ ಪ್ರವೀಣ, ಚಿನ್ಮಯಿ ಮೀನಾಕ್ಷಿ, ಶ್ರೀಧರ್ ಮುಂತಾದರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಾ.ಎಸ್.ಎಸ್ ಕೋಟ್ಯಾಳ, ಪಿಯುಸಿ ವಿಭಾಗದ ಸಂಯೋಜಕಿ ಜಿ.ಎಸ್.ಶೆಲ್ಲಿಕೇರಿ ಇದ್ದರು. ಎಸ್.ಐ.ಪತ್ತಾರ ಪರಿಚಯಿಸಿದರು. ಪೂಜಾ ಕಾಂಬ್ಳೆ ವಂದಿಸಿದರು. ಎಸ್.ಎಸ್.ಪಾಟೀಲ ನಿರೂಪಿಸಿದರು.