ಶ್ರೀರಂಗಪಟ್ಟಣ: ಸಮಾಜದಲ್ಲಿ ಯಾವುದೇ ವ್ಯಕ್ತಿಗಳಾಗಲಿ ದುಶ್ಚಟಗಳಿಂದ ದೂರವಿದ್ದು ವ್ಯಸನಮುಕ್ತರಾಗಿ ಆರೋಗ್ಯಯುತ ಜೀವನ ಸಾಗಿಸಬೇಕು ಎಂದು ಚೇತನಾ ಯಾದವ್ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಾದಕ ವ್ಯಸನಮುಕ್ತ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸೇರಿದಂತೆ ಹೆಚ್ಚು ಜನರು ವಿವಿಧ ರೀತಿಯ ಅನಾರೋಗ್ಯಗಳಿಗೆ ಸಿಲುಕಿ ಮೃತಪಡುತ್ತಿರುವುದು ಅಘಾತದ ಸಂಗತಿಯಾಗಿದೆ. ಸಮಾಜಕ್ಕೆ ಮಾನವ ಸಂಪನ್ಮೂಲ ಸಹ ಬಹುದೊಡ್ಡ ಕೊಡುಗೆಯಾಗಿದ್ದು, ಯಾವುದೇ ವ್ಯಕ್ತಿಗಳು ಅದರಲ್ಲೂ ಯುವ ಸಮುದಾಯ ಧೂಮಪಾನ, ಮದ್ಯಪಾನ, ಗಾಂಜಾ ಸೇವನೆ ಅಥವಾ ಇತರ ದುಶ್ಚಟಗಳಿಗೆ ಒಳಗಾಗದೆ ಅವುಗಳಿಂದ ದೂರವಿದ್ದು, ಕ್ರೀಡೆ, ಯೋಗ ಅಥವಾ ಇತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದೃಢ ಆರೋಗ್ಯ ಹಾಗೂ ಉತ್ತಮ ಮಾನಸಿಕ ನೆಮ್ಮದಿಯನ್ನು ಕಂಡುಕೊಂಡು ಜೀವಿಸಬೇಕು ಎಂದರು.
ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕಿ ತ್ರಿವೇಣಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ರಾಜಸ್ವ ನೀರಿಕ್ಷಕ ರೇವಣ್ಣ, ತಾಲೂಕು ಕಚೇರಿ ಸಿಬ್ಬಂದಿ ಸೋಮು ಸೇರಿದಂತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.