ಅರಕಲಗೂಡಿನಲ್ಲಿ ಭಾನುವಾರ ಏರ್ಪಡಿಸಿದ್ದ ಅನಕೃ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರೊ. ಎಂ. ಕೃಷ್ಣೇಗೌಡ ಅವರಿಗೆ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎ. ಮಂಜು, ಆರ್.ಕೆ. ಪದ್ಮನಾಭ, ಎಚ್.ಎಲ್ ಮಲ್ಲೇಶ್ ಗೌಡ, ಬಿ.ಆರ್. ಬೊಮ್ಮೇಗೌಡ, ನವೀನ್ ಪಿ. ಉಲಿವಾಲ ಇತರರಿದ್ದರು. 
ಜಿಲ್ಲೆ

ಯುವ ಸಮುದಾಯ ಜ್ಞಾನ ಸಂಪಾದನೆ ಮಾಡಿ

ಅರಕಲಗೂಡು: ಕನ್ನಡ ಸಾಹಿತ್ಯ ಅತ್ಯಂತ ಸಮೃದ್ಧವಾಗಿರುವುದರಿಂದ ಭಾಷೆ ಬಳಕೆ ಕುರಿತು ಅವಗಣನೆ ಬೇಕಿಲ್ಲ ಎಂದು ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅಭಿಮಾನಿ ಬಳಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಅನಕೃ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅನಕೃ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಮಹಾನ್ ವ್ಯಕ್ತಿಗಳು, ಸಾಧಕರನ್ನು ಸೃಷ್ಟಿಸಿದ ಹೆಮ್ಮೆಯ ನೆಲ. ಕನ್ನಡಕ್ಕಾಗಿ ಹೋರಾಡಿದ ಕನ್ನಡದ ಕಟ್ಟಾಳು ಅನಕೃ. ಹುಟ್ಟೂರಿನಲ್ಲಿ ಸ್ಮರಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದರು.

ಹಣ ಮತ್ತು ಅಧಿಕಾರ ಆಧುನಿಕ ಜಗತ್ತಿನಲ್ಲಿ ಮನುಷ್ಯನ ಅಹಂಕಾರವನ್ನು ಹೆಚ್ಚಿಸುತ್ತಿದ್ದು, ಇದು ಬಹಳಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ. ಮುಂದಿನದು ಜ್ಞಾನದ ಯುಗ. ಉತ್ತಮ ವಿದ್ಯೆ ಮತ್ತು ಜ್ಞಾನ ಇದ್ದಾಗ ಹಣ, ಅಧಿಕಾರ, ಯಶಸ್ಸು ಹರಸಿ ಬರುತ್ತದೆ. ಯುವ ಜನರು ಉತ್ತಮ ಜ್ಞಾನ ಸಂಪಾದನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಎ.ಮಂಜು ಮಾತನಾಡಿ, ಕನ್ನಡಕ್ಕಾಗಿ ಹೋರಾಡಿದ ಅನಕೃ ನಮ್ಮ ಮೂಲದವರು ಎಂಬುದು ಹೆಮ್ಮೆಯ ಸಂಗತಿ. ಅನಕೃ ಹಾಗೂ ಸಂಗೀತ ಗ್ರಾಮ ರುದ್ರಪಟ್ಟಣ ತಾಲೂಕನ್ನು ವಿಶ್ವದೆಲ್ಲೆಡೆ ಗುರುತಿಸುವಂತೆ ಮಾಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಮಾತನಾಡಿ, 9 ವರ್ಷಗಳಿಂದ ಅನಕೃ ಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪಟ್ಟಣದಲ್ಲಿ ರಾಜ್ಯಮಟ್ಟದ ಶಾಸ್ತ್ರೀಯ ಸಂಗೀತ ಸಮ್ಮೇಳನ ನಡೆಸುವ ಯೋಜನೆ ಇದೆ. ಶಾಸಕರ ಸಹಕಾರ ದೊರೆತಲ್ಲಿ ಈ ವರ್ಷವೇ ಇಲ್ಲಿ ಸಮ್ಮೇಳನ ಆಯೋಜಿಸಲಾಗುವುದು ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಶ್‌ಗೌಡ, ತಾಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ ಮಾತನಾಡಿದರು. ವಾಗ್ಮಿ ಪ್ರೊ. ಕೃಷ್ಣೇಗೌಡ ಅವರಿಗೆ 2023 ನೇ ಸಾಲಿನ ಅನಕೃ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಪಿ. ಉಲಿವಾಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಜಿನ್ನಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಕಾರ್ಯಕ್ರಮದ ಸಂಚಾಲಕ ಪ್ರವೀಣ್ ಕುಮಾರ್, ಆರ್‌ಕೆಪಿ ಅಭಿಮಾನಿ ಬಳಗದ ಅಧ್ಯಕ್ಷ ರಮೇಶ್ ವಾಟಾಳ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕೊತ್ತಲು ಗಣಪತಿ ಉದ್ಯಾನ ಆವರಣದಿಂದ ಕಾರ್ಯಕ್ರಮದ ವೇದಿಕೆವರೆಗೆ ಅನಕೃ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಮರವಣಿಗೆ ಮಾಡಲಾಯಿತು. ವಿವಿಧ ಕಲಾ ತಂಡ ಮೆರವಣಿಗೆಗೆ ಮೆರುಗು ನೀಡಿತು.