ಹಾಸನ: ದೇಶದ ನೆಚ್ಚಿನ, ಯುವ ಸಮುದಾಯದ ಆಶಾಕಿರಣವಾಗಿರುವ ಪ್ರಧಾನಮಂತ್ರಿ ನವ ಮತದಾತ ಸಮ್ಮೇಳನವನ್ನು ಆಯೋಜಿಸಿದ್ದು, ನವ ಮತದಾರರು ಮತ್ತು ಯುವ ಸಮೂಹವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಯುವ ಶಕ್ತಿಯಲ್ಲಿ ದೇಶದ ಶಕ್ತಿ ಅಡಗಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನವ ಮತದಾತ ಸಮ್ಮೇಳನ ವೀಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯುವಕರಿಗೆ ಸಿಗಬೇಕಾದ ಆದ್ಯತೆ, ಸವಲತ್ತುಗಳ ಬಗ್ಗೆ ಹಾಗೂ ಅವರ ಎಲ್ಲಾ ಕನಸ್ಸುಗಳಿಗೆ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಒಂದು ಸರ್ಕಾರ ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡಿಕೊಡುವುದಾಗಿ ಹೇಳಿ ಆಶಾಭಾವನೆ ಮೂಡಿಸಿರುವ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.
ಈ ಕಾರ್ಯಕ್ರಮವು 5 ಸಾವಿರ ಕೇಂದ್ರಗಳಲ್ಲಿ ರಾಷ್ಟ್ರಾದ್ಯಂತ ಆಯೋಜಿಸಲಾಗಿದೆ. ಜಿಲ್ಲಾ, ತಾಲೂಕಿನ ಶಿಕ್ಷಣ ಕೇಂದ್ರಗಳಲ್ಲಿ ಪ್ರೊಜೆಕ್ಟರ್ ಮೂಲಕ ವಿದ್ಯಾರ್ಥಿಗಳು ಪ್ರಧಾನಿ ಭಾಷಣ ವೀಕ್ಷಣೆ ಮಾಡಿದ್ದಾರೆ. 18 ವರ್ಷ ತುಂಬಿದವರು ಮೊದಲು ಮತದಾರರು ಆಗಬೇಕು. ಮೊದಲಿನಂತೆ ಈಗಿಲ್ಲ. ಎಲ್ಲಾ ಇ ಕೆವೈಸಿ ಮೂಲಕ ಪಡೆಯಬಹುದು. ಹೆಚ್ಚು ಯುವ ಮತದಾರರು ನೋಂದಣಿ ಆಗುವ ಮೂಲಕ ಉತ್ತಮ ದೇಶ ನಿರ್ಮಾಣ ಮಾಡಲು ಕೈ ಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಪ್ರದೀಪ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಎಚ್.ಎಸ್. ನರಸಿಂಹನ್, ಸಹಾಯಕ ಆಡಳಿತಾಧಿಕಾರಿ ಪಾರ್ವತಮ್ಮ, ಎನ್‌ಎಸ್‌ಎಸ್. ಅಧಿಕಾರಿ ಡಾ. ವಿಜಯಕುಮಾರ್, ಅಧೀಕ್ಷಕ ಶಿವಕುಮಾರ್, ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಸಂಚಾಲಕ ರಾಕೇಶ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಮಾಧ್ಯಮ ಸಂಚಾಲಕರಾದ ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.