ಹೊಳೆಆಲೂರ: ಯೌವನದ ಮದದಲ್ಲಿ ಮಂಕು ಕವಿದಿರುವ ಯುವ ಶಕ್ತಿಗೆ ಅಧ್ಯಾತ್ಮದ ಸಿಂಚನ ರ್ಸ³ಸಿದಾಗ ಮಾತ್ರ ಜ್ಞಾನದ ಪರಿಜ್ಞಾನ ಉಂಟಾಗಿ ನಮ್ಮ ಭವ್ಯ ಸಂಸ್ಕಾರ ಪರಂಪರೆಯ ದಿವ್ಯ ದರ್ಶನವಾಗುತ್ತದೆ. ನಮ್ಮ ಧಾರ್ವಿುಕ ಸಾಧು-ಸಂತರು ಅನಾದಿ ಕಾಲದಿಂದ ಗುರುಕುಲ ಕುಟೀರ ಕಟ್ಟಿಕೊಂಡು ಸಮಾಜಕ್ಕೆ ಜ್ಞಾನ ಹಂಚುವ ಮೂಲಕ ಮನುಕುಲಕ್ಕೆ ಪರಮಾತ್ಮನ ಅನುಸಂಧಾನ ಒದಗಿಸಿದ್ದಾರೆ ಎಂದು ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಡಾ. ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಹೊಳೆಆಲೂರ ಯಚ್ಚರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ಯಚ್ಚರೇಶ್ವರ ಪ್ರವಚನ ಸಮಿತಿ ವತಿಯಿಂದ 11 ದಿನ ಜರುಗುವ ‘ಜೀವನ ದರ್ಶನ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಅಂಗವಾಗಿ ಭಾನುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನ ಜಾಗರಣ ಪಾದಯಾತ್ರೆ ನೇತೃತ್ವ ವಹಿಸಿ ಅವರು ಮಾತನಾಡಿದರು. ನಮ್ಮ ಧರ್ಮಕ್ಕೆ ಯಾವುದೇ ರೀತಿಯ ಅನ್ಯಾಯ, ಆಕ್ರಮಣ ಒದಗಿದರೆ ಸಮಾಜ ಸದಾ ಜಾಗ್ರತವಾಗಿದ್ದು ಒಟ್ಟಾಗಿ ನಿಲ್ಲಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಯಚ್ಚರೇಶ್ವರ ಸ್ವಾಮಿಗಳು ಮಾತನಾಡಿ, ಸಮಾಜದ ಅವಕಾಶ ವಂಚಿತ ದುರ್ಬಲ ವರ್ಗದ ಏಳಿಗೆಗಾಗಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸಾಮರಸ್ಯದ ವಾತಾವರಣ ನೆಲೆಸುತ್ತದೆ ಎಂದರು.
ಗ್ರಾಮದ ಯಚ್ಚರೇಶ್ವರ ಮಠದ ಓಣಿ, ದುರ್ಗದ ಬೈಲ್, ಮೇಘರಾಜ ನಗರ, ಸಾಯಿ ನಗರ, ಬಸವ ನಗರ, ಸೇವಾಲಾಲ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳಿಂದ ಪಾದಯಾತ್ರೆ ಜರುಗಿತು. ಕೋರಣೇಶ್ವರ ಶಾಖಾ ಮಠದ ದಿವಾನ ಶರೀಫಸ್ವಾಮಿ, ಪ್ರವಚನ ಸಮಿತಿಯ ಅಧ್ಯಕ್ಷ ಚಂದ್ರಕಾಂತಗೌಡ ಪಾಟೀಲ, ಪ್ರವೀಣ ಶಲ್ಲಿಕೇರಿ, ಮಾರುತಿ ಮಂಡಸೊಪ್ಪಿ, ಮಹೇಂದ್ರಗೌಡ ಪಾಟೀಲ, ಪಾಂಡುರಂಗ ಪತ್ತಾರ, ಶೇಖಣ್ಣ ಹಿರೇಹಾಳ, ಶಂಕರಗೌಡ್ರ ಗಿರಡ್ಡಿ, ಶಿವಾನಂದ ಹೂಗಾರ, ಸಂಗಪ್ಪ ಅಂಗಡಿ, ಯಚ್ಚರಪ್ಪ ಕುರ್ಲಗೇರಿ, ಎಚ್.ಕೆ.ಪಟೇಲ, ಲೋಕೇಶ ರಾಠೋಡ, ಮಹಾದೇವಪ್ಪ ಗಂಗೂರ, ಕಲ್ಮೇಶ್ವರ ಭಜನಾ ತಂಡದ ಸದಸ್ಯರು ಭಾಗವಹಿಸಿದ್ದರು.