ಬೆಳಗಾವಿ: ದೇಶದಲ್ಲಿಯೇ ಪ್ರಥಮ ಬಾರಿಗೆ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ‘ಟ್ರಾನ್ಸ್ ಡಿಸಿಪ್ಲೇನರಿ ಲರ್ನಿಂಗ್ ಸೊಲ್ಯೂಷನ್’ ಸಂಸ್ಥೆ ಮಾರ್ಗದರ್ಶನದಲ್ಲಿ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ.
ನಾಡಿನ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ, ಗಣಿತ ಹಾಗೂ ಮಾನವೀಯತೆಯ ಕುರಿತು ಸಂಶೋಧನೆ ಕೈಗೊಳ್ಳುವುದರ ಜತೆಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಪಡೆಯಲಿ ಎಂಬ ಸದುದ್ದೇಶದಿಂದ ಕೇಂದ್ರ ಆರಂಭಿಸಲಾಗುತ್ತಿದೆ.
ಕೇಂದ್ರದಲ್ಲಿ ರೋಬಾಟಿಕ್ಸ್, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನ, ಪುನರ್ ಬಳಸಬಹುದಾದ ಶಕ್ತಿಯ ಮೂಲಗಳು ಸೇರಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಪೂರಕ ವಿಷಯಗಳ ಕುರಿತು ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು ದೇಶದ ಹೆಸರಾಂತ ವಿಜ್ಞಾನಿಗಳಿಂದ ಹಾಗೂ ಸಂಶೋಧಕರಿಂದ ತರಬೇತಿ ಪಡೆಯಲಿದ್ದಾರೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಸಂಶೋಧನಾ ಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಿಗೆ ಇದೊಂದು ಅವಕಾಶ. ಆಸಕ್ತ ವಿದ್ಯಾರ್ಥಿಗಳು ಜ.31ರೊಳಗೆ ಉಚಿತ ನೋಂದಣಿ ಮಾಡಿಕೊಳ್ಳಬಹುದು. ಸಂಶೋಧನಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಆಯ್ಕೆ ದೃಷ್ಟಿಯಿಂದ ಫೆ.2ರಂದು ಶಿವಬಸವನಗರದ ಸಿದ್ಧರಾಮೇಶ್ವರ ಸ್ವತಂತ್ರ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ಯುವವಿಜ್ಞಾನಿ ಆಯ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.