ಜಿಲ್ಲೆ

ಯುವ ರೈತನಿಗೆ ಸಿಹಿ ನೀಡುವುದೇ ಸೀತಾಫಲ

ಕೊಡೇಕಲ್: ದಾಳಿಂಬೆ, ಚಿಕ್ಕು, ಮೋಸಂಬಿ ಸೇರಿ ಇತರೆ ತೋಟಗಾರಿಕೆ ಬೆಳೆಯನ್ನು ಬೆಳೆದು ಲಾಭ ಗಳಿಯುವ ರೈತರು ಈಗ ಸೀತಾಫಲ ಬೆಳೆಗೂ ಕೈಹಾಕಿದ್ದಾರೆ. ಆದರೆ ಈ ಬೆಳೆ ರೈತನಿಗೆ ಸಿಹಿ ನೀಡುವುದೇ ಎಂಬುದು ಕಾದು ನೋಡಬೇಕಾಗಿದೆ.

ಹುಣಸಗಿ ತಾಲೂಕಿನ ಕಮಲಾಪುರ ಗ್ರಾಮದ ಯುವ ರೈತ ಪರಶುರಾಮ ಹುಡೇದ್ ತಮ್ಮ ಒಂದು ಎಕರೆ ಭೂಮಿಯಲ್ಲಿ ಸೀತಾಫಲ ಬೆಳೆಯುವ ಮೂಲಕ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದು, ಈ ಬೆಳೆಗೆ ಸ್ವಲ್ಪ ನೀರು ಸಾಕು, ಕೀಟಬಾಧೆ ತೀರಾ ಕಡಿಮೆ, ಗಿಡಗಳ ನಿರ್ವಹಣೆ ಕರ‍್ಯ ಸುಲಭ, ಕೃಷಿ ವೆಚ್ಚ ಕೂಡ ಹೆಚ್ಚೇನಿಲ್ಲ. ಆದಾಯ ಮಾತ್ರ ಉಳಿದೆಲ್ಲ ತೋಟಗಾರಿಕೆ ಬೆಳೆಗಿಂತ ಹೆಚ್ಚಾಗಿದೆ. ಹೀಗಾಗಿ ಒಂದು ಎಕರೆಯಲ್ಲಿ ಸೀತಾಫಲ ಮರ ಬೆಳೆಸಲಾಗಿದೆ ಎನ್ನುತ್ತಾರೆ ಹುಡೇದ್.

ಕೃಷಿಯಲ್ಲಿ ಒಂದಿಲ್ಲೊAದು ಬದಲಾವಣೆ ಮಾಡುತ್ತಾ ಲಾಭ ಪಡೆಯುತ್ತಿರುವ ಪರಶುರಾಮ ತಮ್ಮ ೯ ಎಕರೆ ಜಮೀನಿನಲ್ಲಿ ಕಬ್ಬು, ತೊಗರಿ, ತರಕಾರಿ ಸೇರಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸೀತಾಫಲ ಬೇಸಾಯಕ್ಕೆ ಮುಂದಾಗಿದ್ದು, ಕೊಪ್ಪಳ ಜಿಲ್ಲೆಯ ತರಳಗಟ್ಟಿ ನರ್ಸರಿಯಿಂದ ೪೦೦ಕ್ಕೂ ಅಧಿಕ ಸಸಿಗಳನ್ನು ತಂದು ಒಂದು ಎಕರೆಯಲ್ಲಿ ೧೦*೧೦ ನೆಟ್ಟು ಕೊಳವೆಬಾಯಿಂದ ಡ್ರೀಪ್ ಮಾಡಲಾಗಿದೆ.

ಈ ಗಿಡಗಳಿಗೆ ಯಾವುದೆ ರೀತಿಯ ಕ್ರಿಮಿನಾಶಕ ಸಿಂಪಡಣೆ ಮಾಡದೆ ಸಾವಯವ ಕೃಷಿ ಪದ್ಧತಿಯಿಂದ ಒಂದು ವರ್ಷದವರೆಗೆ ಸೀತಾಫಲ ಗಿಡ ಬೆಳೆಸಿದ್ದಾರೆ. ಈಗ ಗಿಡಗಳು ಹೂ ಮತ್ತು ಕಾಯಿ ಬಿಡುವ ಹಂತದಲ್ಲಿದ್ದು, ಪ್ರಸಕ್ತ ವರ್ಷದ ಇಳುವರಿ ಜತೆಗೆ ಲಾಭ ಪಡೆದುಕೊಳ್ಳಲು ಉತ್ಸೂಕರಾಗಿದ್ದಾರೆ.

ಈ ಮೊದಲು ಗಿಡಗಳ ಮಧ್ಯೆ ತರಕಾರಿ, ಕಲ್ಲಂಗಡಿ ಬೆಳೆದು ಉತ್ತಮ ಲಾಭವನ್ನು ಪಡೆದುಕೊಂಡಿದ್ದಾರೆ. ಸೀತಾಫಲದ ಜತೆಗೆ ತೆಂಗು, ಚಿಕ್ಕು, ಮೋಸಂಬಿ, ಮಾವು, ಆರೇಂಜ್ ಸೇರಿ ಇನ್ನಿತರ ಹಣ್ಣುಗಳನ್ನು ಬೆಳೆದು ಪೊಷಣೆ ಮಾಡುವ ಮೂಲಕ ಇತರೆ ರೈತರಿಗೆ ಪರಶುರಾಮ ಮಾದರಿಯಾಗಿದ್ದಾರೆ.