ಜಿಲ್ಲೆ

ಯುವ ಮನಸ್ಸಿಗೆ ಪೂರಕ ವಾತಾವರಣ ನಿರ್ಮಾಣ

ಬೆಳಗಾವಿ: ಅಂಗಡಿ ಇಂಟರ್‌ನ್ಯಾಶನಲ್ ಸ್ಕೂಲ್ ಯುವ ಮನಸ್ಸುಗಳಿಗೆ ಪೂರಕವಾದ ವಾತಾವರಣ ಕಲ್ಪಿಸಿ, ಜಾಗತಿಕ ಮೌಲ್ಯಗಳನ್ನು ಕಲಿಸುತ್ತದೆ ಎಂದು ರೇಣುಕಾ ಶುಗರ್ಸ್ ಸಂಸ್ಥಾಪಕಿ, ರವೀಂದ್ರ ಎನರ್ಜಿ ಕಾರ್ಯಾಧ್ಯಕ್ಷೆ ವಿದ್ಯಾ ಮರಕುಂಬಿ ಶ್ಲಾಘಿಸಿದರು.

ಎಸ್‌ಎಇಎಫ್ ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್ 10ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಏಕತೆ ಮತ್ತು ಪ್ರತಿಭೆ ಉತ್ತೇಜಿಸುವಲ್ಲಿ ಶಾಲೆಯ ಪ್ರಯತ್ನಗಳು ಮೆಚ್ಚುಗೆ ಪಾತ್ರವಾಗಿವೆ ಎಂದರು.

ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ ಮಾತನಾಡಿ, ಭವಿಷ್ಯದ ನಾಯಕರನ್ನು ರೂಪಿಸುವಲ್ಲಿ ಸಮಗ್ರ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಶಾಲೆಯಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ-ಸಾಂಸ್ಕೃತಿಕ ಉತ್ಕೃಷ್ಟತೆ ಬೆಳೆಸುವುದಕ್ಕೆ ಶಾಲೆಯನ್ನು ಸಮರ್ಪಿಸಲಾಗಿದೆ ಎಂದರು.

ನೃತ್ಯ, ಸಂಗೀತ ಮತ್ತು ಚಿಂತನ, ಕಿರು ನಾಟಕ ಒಳಗೊಂಡಂತೆ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನಡೆದವು. ವಸುಧೈವ ಕುಟುಂಬಕಂ ಪರಿಕಲ್ಪನೆಗೆ ಜೀವ ತುಂಬುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸಮರ್ಪಣಾ ಭಾವದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷೆ ಮಂಗಲ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯೆ ಸಂಗೀತಾ ದೇಸಾಯಿ, ಸಾಂಸ್ಕೃತಿಕ ಸಂಯೋಜಕಿ ಸುಜಾತಾ ಸುತಾರ ಇದ್ದರು.