ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾನಪದ ಸಾಹಿತ್ಯ ಜನಪದದ ಜೀವನಾನುಭವದ ರಸಘಟ್ಟ. ಅದು ತಲತಲಾಂತರದಿಂದ ನಮ್ಮ ಹಿರಿಯರಿಂದ ಬಂದ ಸಾಂಸ್ಕೃತಿಕ ಬಳುವಳಿಯಾಗಿದೆ ಎಂದು ವೈಶುದೀಪ ಫೌಂಡೇಶನ್ ಕಾರ್ಯದರ್ಶಿ ಶಿವಲೀಲಾ ವಿನಯ ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ನಗರದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪ್ಪಿನಬೆಟಗೇರಿಯ ಶ್ರೀ ಕಲ್ಮೇಶ್ವರ ಸಾಂಸ್ಕೃತಿಕ ಮಹಿಳಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜನಪದರು ಜಾನಪದ ಹಾಡು ಹಾಡಿ ಮನಸ್ಸಿನ ಭಾರ ಇಳಿಸಿಕೊಳ್ಳುತ್ತಿದ್ದರು. ಇಂತಹ ಮೋಹಕ ದೇಸಿ ಸಾಹಿತ್ಯವನ್ನು ಯುವ ಪೀಳಿಗೆಗೆ ತಿಳಿಸಿ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ನಮ್ಮೆಲ್ಲರ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಜಾನಪದ ಸಾಹಿತ್ಯ ಸಹಕಾರಿಯಾಗಿದೆ ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಜಾನಪದ ಸಾಹಿತ್ಯ ಮನಸ್ಸಿನ ಬೇಸರ, ದುಗುಡ, ದುಮ್ಮಾನಗಳನ್ನು ಕಳೆದು ಚೈತನ್ಯ, ಜೀವನೋಲ್ಲಾಸ ತುಂಬುವ ಶಕ್ತಿ ಹೊಂದಿದೆ. ಈ ಸಾಹಿತ್ಯದಲ್ಲಿ ನಮ್ಮ ಜನಪದದ ಇಡೀ ಜೀವನದ ಜೀವಂತ ಚಿತ್ರಣವಿದೆ. ಜಾನಪದ ಹಾಡುಗಳಲ್ಲಿ ಹೃದಯ ಮುಟ್ಟುವ, ರಸಾನಂದಗೊಳಿಸುವ ಕಲಾಶಕ್ತಿ ಇದೆ ಎಂದರು.
ಉಪ್ಪಿನಬೆಟಗೇರಿ ಗ್ರಾಪಂ ಅಧ್ಯಕ್ಷ ಮಂಜು ಮಸೂತಿ ಅಧ್ಯಕ್ಷತೆ ವಹಿಸಿದ್ದರು. ವಸಂತಾ ಜವಳಿಮಠ, ನ್ಯಾಯವಾದಿ ಪ್ರಕಾಶ ಭಾವಿಕಟ್ಟಿ, ಸಂಘದ ಅಧ್ಯಕ್ಷೆ ಮಹಾದೇವಿ ಹಿರೇಮಠ, ರಾಚಯ್ಯ ವಿಭೂತಿಮಠ, ಸಿದ್ದಯ್ಯ ಪಾಳೇದಮಠ, ರೇಣುಕಾ ಮೇಟಿ, ರಾಚಯ್ಯ ವಿಭೂತಿಮಠ, ಅನಸೂಯಾ ಪಾಳೇದಮಠ, ಮಡಿವಾಳಪ್ಪ ತಳವಾರ, ಇತರರು ಇದ್ದರು.
ಯಕ್ಕೇರಪ್ಪ ಶಾನವಾಡ ಮಾಸ್ತರ ಸ್ವಾಗತಿಸಿದರು. ನಂತರ ಜಾನಪದ ಕಾರ್ಯಕ್ರಮ ನಡೆಯಿತು.