ಹಾಸನ: ಕನ್ನಡ ನಾಡು-ನುಡಿ, ಸಂಸ್ಕೃತಿಯ ಕುರಿತು ಇಂದಿನ ಯುವ ಪೀಳಿಗೆ ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಎಚ್.ಬಿ. ಮದನಗೌಡ ಅಭಿಪ್ರಾಯಪಟ್ಟರು.
ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಭಾಷೆಯಾಗಿದ್ದು, ಯುವಕರು ನಮ್ಮ ಮಾತೃ ಭಾಷೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಾತೃ ಭಾಷೆಯಾಗಿರುವ ಕನ್ನಡವನ್ನು ನಾವು ಕೇವಲ ಓದುವುದು, ಮಾತನಾಡುವುದಷ್ಟೆ ನಮ್ಮ ಭಾಷೆಗೆ ಇರುವ ಪರಂಪರೆಯ ಬಗ್ಗೆ ತಿಳಿಯಬೇಕು ಎಂದು ಕರೆ ನೀಡಿದರು.
ನಮ್ಮ ನಾಡು ಪಾಕೃತಿಕವಾಗಿ ಹಲವು ವೈಶಿಷ್ಟೃಗಳನ್ನು ಹೊಂದಿದ್ದು, ಪ್ರತಿಯೊಂದು ಸ್ಥಳಗಳ ಬಗ್ಗೆ ಮಾಹಿತಿ ಹೊಂದಬೇಕು. ಕನ್ನಡ ಭಾಷೆಯ ಮೂಲ ಬೇರಾಗಿರುವ ಹಲ್ಮಿಡಿ ಶಾಸನವನ್ನು ಕೊಟ್ಟ ಜಿಲ್ಲೆ ನಮ್ಮದು. ಯುವಕರು ಒಮ್ಮೆಯಾದರೂ ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಶಾಸನದ ಪ್ರತಿ ರೂಪಕವಾಗಿರುವ ಶಾಸನದ ಪ್ರತಿಮೆಯನ್ನು ನೋಡಬೇಕು. ನಮ್ಮ ಜಿಲ್ಲೆಯಲ್ಲಿ ಕಲೆ, ಸಂಸ್ಕೃತಿ ಬಹಳ ಇಂದಿನಿಂದ ಬಂದಿದೆ. ಇದನ್ನು ಉಳಿಸಿ ಬೆಳೆಸು ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.
ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಮಂಜೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕೇವಲ ನವೆಂಬರ್ 1 ರಂದು ಆಚರಣೆ ಮಾಡಿ ಸುಮ್ಮನಾಗಬಾರದು. ಕನ್ನಡ ಭಾಷೆಯನ್ನು ಬಳಸುವ ಮೂಲಕ, ಅದರ ಬಗ್ಗೆ ತಿಳಿದುಕೊಳ್ಳುವ ಮೂಲಕ ಪ್ರತಿದಿನ ನಾವು ಕನ್ನಡದ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ನವೀನ್ ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿ ನಮ್ಮ ಜಿಲ್ಲೆಯ ಮಾಧ್ಯಮ ಕ್ಷೇತ್ರದ ಸಾಧಕ ಎಚ್.ಬಿ. ಮದನ್‌ಗೌಡ ಅವರಿಗೆ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಅವರು ಕೇವಲ ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಕನ್ನಡ ಭಾಷೆಗಾಗಿ ಅವರ ದುಡಿಮೆ ಅಪಾರವಾದದ್ದು, ಹಲ್ಮಿಡಿ ಶಾಸನದ ಸಂರಕ್ಷಣೆ, ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸು ನಿಟ್ಟಿನಲ್ಲಿ ಅವರ ಹೋರಾಟ, ಪರಿಶ್ರಮ ಮೆಚ್ಚುವಂತಹದ್ದು. ಇಂದಿಗೆ ಅವರು ಹಲ್ಮಿಡಿ ಗ್ರಾಮಕ್ಕೆ ಶಾಸನ ದೊರೆತ ಜಾಗದ ಅಭಿವೃದ್ಧಿಗೆ ಅವರು ಕೈಗೊಂಡಿರುವ ಕಾರ್ಯಗಳು ಇತರರಿಗೆ ಮಾದರಿ ಎಂದರು.
ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್ ಖಜಾಂಚಿ ವೈ.ಎಚ್. ಈಶ್ವರಪ್ಪ, ಬೆಸ್ಟ್ ಪಿ.ಯು. ಕಾಲೇಜು ಪ್ರಾಂಶುಪಾಲ ಮಧು, ಅಧ್ಯಾಪಕರಾದ ಅತಿಥ್, ಪುನೀತ್ ಹಾಗೂ ಇತರರು ಹಾಜರಿದ್ದರು.