ಜಿಲ್ಲೆ

ಯುವ ದಸರಾದಲ್ಲಿ ಮಂಗ್ಲಿ, ಸುನಿಧಿ ಚೌಹಾಣ್ ಗಾಯನ ಮೋಡಿ

ಮೈಸೂರು: ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಹಿನ್ನೆಲೆ ಗಾಯಕರಾದ ಅಮಿತ್ ತ್ರಿವೇದಿ ಹಾಗೂ ಸುನಿಧಿ ಚೌಹಾಣ್ ಅವರ ಗೀತಗಾಯನ…!

ಈ ವರ್ಷದ ‘ಯುವ ದಸರಾ’ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಇದು. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವರ್ಣರಂಜಿತ ಯುವ ದಸರಾ ಸೆ. 27ರಿಂದ ಏಳು ದಿನಗಳ ಕಾಲ ಸಂಜೆ 6ರಿಂದ ರಾತ್ರಿ 10ರ ವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ನಾಯಕ ನಟ ಸುದೀಪ್ ವಿಶೇಷ ಆಹ್ವಾನಿತರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿಯೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
27ರಂದು ಉದ್ಘಾಟನೆ ಬಳಿಕ ಶ್ರೀಧರ್ ಜೈನ್ ನೃತ್ಯ ತಂಡದಿಂದ ನರ್ತನ, ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರಿಂದ ಗಾಯನ ಇರಲಿದೆ. ರಾಬರ್ಟ್ ಚಿತ್ರದ ‘ಕಣ್ಣೇ ಅದಿರಿಂದ’ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ ಗಾಯಕಿ ಮಂಗ್ಲಿ ಮೊದಲ ಬಾರಿಗೆ ಯುವ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಗಾಯನ ಮೋಡಿ ಮಾಡಲಿದ್ದಾರೆ.
2ನೇ ದಿನವಾದ 28ರಂದು ಹಿರಿಯ ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್ ಅವರಿಂದ ‘ಅಪ್ಪು ನಮನ’ ಮೂಲಕ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಸಂಗೀತ ನಮನ ಅರ್ಪಿಸಲಾಗುತ್ತದೆ. ಈ ಗಾಯಕರಿಗೆ ‘ಮರ್ಡರ್’ ಚಿತ್ರದ ಭೀಗೆ ಹೋಂತ್ ತೇರೆ… ಹಾಡಿನೊಂದಿಗೆ ಜನಪ್ರಿಯತೆ ಗಳಿಸಿದ ಕುನಾಲ್ ಗಾಂಜಾವಾಲ್ ಕೂಡ ಜತೆಯಾಗಲಿದ್ದಾರೆ.

29ರಂದು ಲೇಸರ್ ಷೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ. ಹಿಂದಿ ಗಾಯಕಿ ಕನ್ನಿಕಾ ಕಪೂರ್ ಅವರು ಸಂಗೀತದ ಮೋಡಿ ಮಾಡಲಿದ್ದಾರೆ. 30ರಂದು ಸ್ಯಾಂಡಲ್‌ವುಡ್ ನೈಟ್ ನಡೆಯಲಿದ್ದು, ಕನ್ನಡ ಚಲನಚಿತ್ರರಂಗದ ವಿವಿಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಅ. 1ರಂದು ಡಾ.ಶಮಿತ ಮಲ್ನಾಡ್ ಅವರಿಂದ ಗಾಯನ, 2ರಂದು ಹರ್ಷಿಕಾ ಪೂಣಚ್ಚ ಮತ್ತು ವಿಜಯರಾಘವೇಂದ್ರ ಅವರಿಂದ ನೃತ್ಯ ಕಾರ್ಯಕ್ರಮ. ಬಳಿಕ ಹಿಂದಿ ಗಾಯಕ ಅಮಿತ್ ತ್ರಿವೇದಿ ಅವರಿಂದ ಗೀತಗಾಯನ ನಡೆಯಲಿದೆ. ಕೊನೆಯ ದಿನವಾದ ಅ. 3ರಂದು ಫ್ಯಾಷನ್ ಷೋ ಜರುಗಲಿದ್ದು, ಬಳಿಕ ಬಾಲಿವುಡ್‌ನ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಸಂಗೀತದ ಸೋನೆ ಮಳೆ ಸುರಿಸಲಿದ್ದಾರೆ.

ಕಲಾವಿದರ ಪುನರಾವರ್ತನೆ:
ಈ ಸಲ ಯುವ ದಸರಾ ಸಪ್ಪೆ ಎನಿಸಿದೆ. ದೊಡ್ಡ ಮಟ್ಟದ ಕಲಾವಿದರು, ಖ್ಯಾತನಾಮರನ್ನು ಆಹ್ವಾನಿಸಿಲ್ಲ. ಗಾಯಕರಾದ ಸುನಿಧಿ ಚೌಹಾಣ್, ಡಾ.ಶಮಿತಾ ಮಲ್ನಾಡ್, ರಘುದೀಕ್ಷಿತ್, ವಿಜಯಪ್ರಕಾಶ್, ಗುರುಕಿರಣ್ ಕರೆಸುವ ಮೂಲಕ ಪುನರಾವರ್ತನೆಯಾಗಿದೆ. ಈ ಹಿಂದೆ ಇವರು ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ್ದರು. ಇದೀಗ ಮತ್ತೊಮ್ಮೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಗಾಯಕರಾದ ಮಂಗ್ಲಿ, ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮಾತ್ರ ಹೊಸಬರು.

ದುಂದುವೆಚ್ಚ ಮಾಡುವುದಿಲ್ಲ:
ಯುವ ದಸರಾದಲ್ಲಿ ದುಂದುವೆಚ್ಚ ಮಾಡುವುದಿಲ್ಲ, ಕಲಾವಿದರಿಗೆ ತಕ್ಕಂತೆ ಗೌರವ ಸಂಭಾವನೆ ನೀಡಲಾಗುವುದು ಎಂದು ಎಸ್‌ಪಿ ಆರ್.ಚೇತನ್ ತಿಳಿಸಿದರು.
ಒಬ್ಬೊಬ್ಬ ಕಲಾವಿದರಿಗೆ ಒಂದೊಂದು ರೀತಿಯ ಸಂಭಾವನೆ ನೀಡಿದ್ದು, ಈ ಕುರಿತು ಯುವ ದಸರಾ ಮುಗಿದ ಬಳಿಕ ತಿಳಿಸಲಾಗುವುದು. ಶೇ. 40ರಷ್ಟು ಕಲಾವಿದರನ್ನು ನೇರವಾಗಿ ಸಂಪರ್ಕಿಸಲಾಗಿದೆ. ಉಳಿದ ಕಲಾವಿದರನ್ನು ಕಂಪನಿ, ಮ್ಯಾನೇಜರ್ ಮೂಲಕ ಮಾತುಕತೆ ನಡೆಸಲಾಗಿದೆ. ನಟ ಸುದೀಪ್‌ಗೆ ಸಂಭಾವನೆ ನೀಡಿಲ್ಲ. ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸೆ.27ರಂದು ಗಾಯಕರಾದ ರಘು ದೀಕ್ಷಿತ್, ಮಂಗ್ಲಿ ಗಾಯನ
ಸೆ.28ರಂದು ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ್ ಅವರಿಂದ ಅಪ್ಪು ನಮನ
ಸೆ.29ರಂದ ಲೇಸರ್ ಷೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ, ಗಾಯಕಿ ಕನ್ನಿಕಾ ಕಪೂರ್ ಅವರಿಂದ ಗಾಯನ
ಸೆ.30ರಂದು ಸ್ಯಾಂಡಲ್‌ವುಡ್ ನೈಟ್
ಅ.1ರಂದು ಡಾ.ಶಮಿತ ಮಲ್ನಾಡ್ ಅವರಿಂದ ಗಾಯನ,
2ರಂದು ಹರ್ಷಿಕಾ ಪೂಣಚ್ಛ ಮತ್ತು ವಿಜಯರಾಘವೇಂದ್ರ ಅವರಿಂದ ನೃತ್ಯ, ಗಾಯಕ ಅಮಿತ್ ತ್ರಿವೇದಿ ಅವರಿಂದ ಗಾಯನ
ಅ.3ರಂದು ಫ್ಯಾಷನ್ ಷೋ, ಸುನಿಧಿ ಚೌಹಾಣ್ ಗಾಯನ