ಜಿಲ್ಲೆ

ಯುವ ಜನಾಂಗಕ್ಕೆ ಕಾನೂನು ಅರಿವು ಅಗತ್ಯ

ಚಾಮರಾಜನಗರ: ಪ್ರಸ್ತುತ ಜಗತ್ತಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಮಯದಲ್ಲಿ ಯುವಜನಾಂಗಕ್ಕೆ ಕಾನೂನು ಅರಿವು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹೇಳಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವ ವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಚಾಮರಾಜನಗರ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ವಿದ್ಯಾರ್ಥಿ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ತಳಹದಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಪ್ರತಿಯೊಬ್ಬ ಪ್ರಜೆಗಳಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಕಲ್ಪಿಸಿಕೊಟ್ಟಿದೆ. ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ನಮ್ಮ ಕಾನೂನು ಪಾಲನೆ ಮಾಡಿದರೇ, ಯಾವುದೇ ಅಪರಾಧಗಳು ಉಂಟಾಗುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಯುವಜನಾಂಗ ನಮ್ಮ ಕಾನೂನುಗಳನ್ನು ಪಾಲನೆ ಮಾಡಬೇಕಿದೆ ಎಂದು ತಿಳುವಳಿಕೆ ನೀಡಿದರು.

ನಮ್ಮ ದೇಶದ ಕಾನೂನು ತಿಳುವಳಿಕೆಯ ಜತೆಗೆ ಯುವಜನಾಂಗ ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇತ್ತೀಚೆಗೆ ಯುವಕರಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದ್ದು, ಪ್ರತಿಯೊಬ್ಬರ ಮೇಲೆ ಅನುಕಂಪ ಇರಬೇಕು. ಸಹನೆ, ಪ್ರೀತಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು, ಹಿರಿಯರ ಮಾರ್ಗದರ್ಶನವನ್ನು ಗೌರವಿಸಬೇಕು ಎಂದರು.

ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯುವ ಜನಾಂಗದಿಂದ ಆಗುತ್ತಿರುವ ಅನಾಹುತಗಳನ್ನು ನೋಡಿದಾಗ ಹೆಚ್ಚಿನವರಿಗೆ ಕಾನೂನು ಅರಿವು ಅಗತ್ಯವಾಗಿದೆ. ಈ ದೇಶದ ಪ್ರಜೆಯಾಗಿ ಪ್ರತಿಯೊಬ್ಬರು ನೆಲದ ಕಾನೂನನ್ನು ಗೌರವಿಸುವ ಮೂಲಕ, ಅದರ ಅರಿವನ್ನು ಪಡೆದುಕೊಳ್ಳಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪಾಲಕರ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಕುಲ ಸಚಿವ(ಆಡಳಿತ) ಆರ್.ಲೋಕನಾಥ್, ಪರೀಕ್ಷಾಂಗ ಕುಲ ಸಚಿವ ಡಾ.ಜಿ.ವಿ.ವೆಂಕಟರಮಣ, ಬಿ.ಎಸ್.ವಿ ಫೌಂಡೇಶನ್ ಅಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ, ಜಿಲ್ಲಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಜಯೀರ್ ಅಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ:

ಕಾರ್ಯಕ್ರಮದಲ್ಲಿ ಚಾಮರಾಜನಗರ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 40 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ವಿದ್ಯಾರ್ಥಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಕ್ರಮವನ್ನು ರೂಪಿಸಿಕೊಂಡು ಬರಲಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ನಮಗೆ ಬೆಂಬಲವಾಗಿ ನಿಂತಿದೆ.

-ಜಿ.ಬಂಗಾರು, ಅಧ್ಯಕ್ಷ, ಜಿಲ್ಲಾ ಪತ್ರಕರ್ತರ ಸಂಘ, ಚಾಮರಾಜನಗರ