ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನ ಹೆಮ್ಮಾರಿಯಾಗಿ ಕಾಡುತ್ತಿದ್ದು, ದಿನಕೊಬ್ಬರನ್ನು ಬಲಿ ಪಡೆದುಕೊಳ್ಳುತ್ತಿದೆ. ಅದರಲ್ಲೂ 30 ವರ್ಷದೊಳಗಿನ ಯುವಕ-ಯುವತಿರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಕಳೆದ 30 ದಿನಗಳ ಅಂತರದಲ್ಲಿ 17 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದು, ಸಾರ್ವಜನಿಕರ ವಲಯದಲ್ಲಿ ಭೀತಿ ಆವರಿಸುವಂತೆ ಮಾಡಿದೆ. ಇಷ್ಟೆಲ್ಲಾ ಸಾವುಗಳಾದರೂ ರಾಜ್ಯ ಆರೋಗ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಹೃದಯಾಘಾತ ಸಂಬಂಧ ವಾರದ ಹಿಂದೆ ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಸಭೆ ನಡೆಸಿ ಕೆಲವು ಕ್ರಮಗಳಿಗೆ ಮುಂದಾಗುವ ನಿರ್ಣಯ ತೆಗೆದುಕೊಂಡಿದ್ದು ಬಿಟ್ಟರೆ ಮತ್ಯಾವ ಕ್ರಮಗಳು ಆಗಿಲ್ಲ. ಹೀಗಾಗಿಯೇ ದಿನಕ್ಕೊಂದರಂತೆ ಹೃದಯಾಘಾತಕ್ಕೆ ಯುವ ಜನತೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಹೃದಯಾಘಾತದ ಇತಿಹಾಸವನ್ನು ಅವಲೋಕಿಸಿದಾಗ, ಕಳೆದ ಎರಡು ವರ್ಷಗಳಲ್ಲಿ 507 ಹೃದಯಾಘಾತ ಪ್ರಕರಣಗಳು ವರದಿಯಾಗಿದ್ದು, 145 ಸಾವು ಸಂಭವಿಸಿವೆ. ಅದರಲ್ಲೂ ಈ ಒಂದು ತಿಂಗಳಲ್ಲಿ 17 ಜನ ಮೃತಪಟ್ಟಿರುವುದು ಅದರಲ್ಲೂ 40 ವರ್ಷದೊಳಗಿನವೇ ಸಾವನ್ನಪ್ಪಿರುವುದು ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಹೀಗೆ ಸರಣಿ ಸಾವಾಗುತ್ತಿರುವುದಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಹೀಗಾಗಿ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಬಳಿಕ 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ಇಂದು ಯುವ ಸಮೂಹದಲ್ಲಿ ಹೃದಯಾಘಾತಕ್ಕೆ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದೇ ಪ್ರಮುಖ ಕಾರಣ ಎಂದು ಹೇಳುತ್ತಾರೆ ಇಂಡಿಯಾನಾ ಆಸ್ಪತ್ರೆ ಹಾರ್ಟ್ ಸೆಂಟರ್‌ನ ಹೃದ್ರೋಗ ತಜ್ಞ ಡಾ.ಎಂ.ಅನೂಪ್ ಅವರು. ಜೀವನ ಶೈಲಿ, ಜಂಕ್ ಫುಡ್, ನಿಯಮಿತವಾಗಿ ವ್ಯಾಯಾಮ ಇಲ್ಲದಿರುವುದು, ಹೈ ಕ್ಯಾಲೋರಿ ಆಹಾರ ಸೇವನೆ, ಪರಿಸರ ಮಾಲಿನ್ಯದಿಂದ ಇಂದು ಹೆಚ್ಚು ಯುವಕ-ಯುವತಿಯರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಏಕಾಏಕಿ ಕುಸಿದುಬಿದ್ದು ಸಾಯುವುದನ್ನು ಸಡನ್ ಕಾರ್ಡಿಯಾಕ್ ಅರೆಸ್ಟ್ ಎಂದು ಹೇಳುತ್ತೇವೆ. ಇದಕ್ಕೆ ಹಲವು ಕಾರಣಗಳಿವೆ. ಹಾರ್ಟ್ ಜೆನೆಟಿಕ್ ವೀಕ್ ಇರುವುದು, ಹೃದಯ ದಪ್ಪವಾಗಿರುವುದು, ಎಸ್‌ಸಿಇಡಿ ಸಿಂಡ್ರೋಮ್, ಕ್ಯೂಪಿ ಸಿಂಡ್ರೋಮ್, ಬ್ರೂಗಾಡಾ ಹಾಗೂ ಹೃದಯದಲ್ಲಿ ಇತರೆ ಸಮಸ್ಯೆಗಳು ಇದ್ದಲ್ಲೂ ಸಡನ್ ಕಾರ್ಡಿಯಾಕ್ ಅರೆಸ್ಟ್ ಆಗುವ ಸಾಧ್ಯತೆಯೂ ಇದೆ ಎಂದು ಡಾ.ಅನೂಪ್ ಅವರು ಹೇಳುತ್ತಾರೆ.
ಹಾಗೆಯೇ ಮಾನಸಿಕ ಕಾಯಿಲೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದವರಲ್ಲಿ ಇಂತಹ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ, ಭಯ, ಎಮೋಷನ್, ದೊಡ್ಡ ಶಬ್ದ ಕೇಳಿದಾಗ, ವ್ಯಾಯಾಮ ಮಾಡುವಾಗಲೂ ಕಾರ್ಡಿಯಾಕ್ ಅರೆಸ್ಟ್ ಆಗಬಹುದು. ಇನ್ನು ಅನುವಂಶೀಯವಾಗಿ ಹೃದಯ ಸಂಬಂಧಿತ ಕಾಯಿಲೆಗಳು ಜನ್ಮಜಾತವಾಗಿಯೇ ಬಂದಿರುತ್ತದೆ. ಇದನ್ನು ಆರಂಭದಲ್ಲಿಯೇ ಪರೀಕ್ಷಿಸಿಕೊಂಡರೆ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಪಾರಾಗಬಹುದು ಎಂದು ಡಾ.ಎಂ.ಅನೂಪ್ ಅವರ ಸಲಹೆಯಾಗಿದೆ.
ಸಾವನ್ನಪ್ಪಿದ್ದ ವಿವರ
ಒಂದೇ ತಿಂಗಳಲ್ಲಿ 17 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನಾ(20), ಹೊಳೆನರಸೀಪುರ ಪಟ್ಟಣದ ನಿಶಾಂತ್ (20), ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ (35), ಹಾಸನ ಹೊರವಲಯದ ರಾಜಘಟ್ಟದ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51), ಚನ್ನರಾಯಪಟ್ಟಣ ತಾಲೂಕಿನ ಎಂ. ಹೊನ್ನೇನಹಳ್ಳಿ ಗ್ರಾಮದ ಕೆ.ಎಂ. ಚೇತನ್ (32), ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ಸುಪ್ರಿಯಾ (22), ಆಲೂರು ತಾಲೂಕಿನ ಬಾವಿಕೊಪ್ಪಲು ಗ್ರಾಮದ ಮಂಜುನಾಥ್ (51), ಹಾಸನದ ಗೋವಿಂದ (37) ಹೃದಯಾಘಾತ ಅಥವಾ ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟವರು.
ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಆದರೆ ಸರಿಯಾದ ರೀತಿ ಆರೋಗ್ಯ ಕ್ರಮಗಳನ್ನು ಅನುಸರಿಸುವುದು ಮತ್ತು ಉತ್ತಮ ಆಹಾರ ಪದಾರ್ಥ ಸೇವನೆ, ವ್ಯಾಯಾಮ, ಪ್ರತಿ ವರ್ಷವೂ ಕೂಡ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಎದೆ ನೋವು ಕಾಣಿಸಿಕೊಂಡ ತಕ್ಷಣವೇ ನಿರ್ಲಕ್ಷೃ ಮಾಡದೆ ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಇಸಿಜಿ ಹಾಗೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಇನ್ನು ಆರೋಗ್ಯ ಇಲಾಖೆಯಿಂದ ಹೃದಯಾಘಾತದ ಬಗ್ಗೆ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಅವರಲ್ಲಿ ಯಾವುದೇ ದುಷ್ಟ ಚಟಗಳನ್ನು ಬೆಳೆಸಿಕೊಳ್ಳದಂತೆ ಮತ್ತು ಸರಿಯಾದ ರೀತಿ ಜೀವನಶೈಲಿ ನಡೆಸಿಕೊಳ್ಳುವಂತೆ ಕಿವಿಮಾತು ಹೇಳಲಾಗುತ್ತಿದೆ.
ಡಾ.ಅನಿಲ್ ಕುಮಾರ್, ಡಿಎಚ್‌ಒ, ಹಾಸನ
ಕೋವಿಡ್ ಲಸಿಕೆ ನೀಡಿ ಈಗಾಗಲೇ ಎರಡು ವರ್ಷಗಳಾಗಿವೆ. ಸದ್ಯಕ್ಕೆ ಇದರ ಬಗ್ಗೆ ಯಾವುದೇ ನಿರ್ದಿಷ್ಟವಾದ ಅಥವಾ ಅಧಿಕೃತ ಮಾಹಿತಿಯಿಲ್ಲ. ಅನಗತ್ಯ ಗೊಂದಲಗಳಿಗೆ ದಾರಿ ಮಾಡಿಕೊಡುವುದು ಬೇಡ. ರೋಗನಿರೋಧಕ ಕ್ರಮಗಳ ಬಗ್ಗೆ ನಮ್ಮ ಸಮುದಾಯಗಳಿಗೆ ನಾವು ಶಿಕ್ಷಣ ನೀಡಬೇಕು. ನಾಗರಿಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯೋಗ, ಧ್ಯಾನ, ಪೌಷ್ಟಿಕ ಆಹಾರ, ತಜ್ಞರ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಪ್ರತಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ತಪಾಸಣೆ ನಡೆಸುವುದು, ಹಾಗೂ ಎಲ್ಲ ಸರ್ಕಾರಿ, ಸರ್ಕಾರೇತರ ಕಚೇರಿಗಳಲ್ಲಿ ಎಲ್ಲರಿಗೂ ಸಿಪಿಆರ್ ತರಬೇತಿ ನೀಡುವುದು, ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಹಾರ್ಟ್ ರಿ ಬೂಸ್ಟ್‌ಗೊಳಿಸುವ ಬಿ ಸಿಬ್ರಿಲೇಟರ್ ಯಂತ್ರಗಳನ್ನು ಅಳವಡಿಸುವಂತಹ ಕೆಲಸವನ್ನು ಮಾಡಬೇಕು. ಇನ್ನು ಸಾರ್ವಜನಿಕರು, ಯುವಕ-ಯುವತಿಯರು ವಯಸ್ಸಿನ ಮಿತಿಯಿಲ್ಲದೆ ತಪ್ಪದೇ ಹೃದಯ ತಪಾಸಣೆ ಮಾಡಿಕೊಳ್ಳಬೇಕಿದೆ ಎಂದು ಇಂಡಿಯಾನ ಆಸ್ಪತ್ರೆ ಹಾರ್ಟ್ ಸೆಂಟರ್ ಹಾಸನ ಸಂಸ್ಥಾಪಕ ಡಾ.ಎಂ.ಅನೂಪ್ ತಿಳಿಸಿದ್ದಾರೆ.
ಸೇವಿಸುವ ಆಹಾರದ ಬಗ್ಗೆ ಪರಿಶೀಲನೆಯಾಗಲಿ
ಈ ಹಿಂದೆ ವಯಸ್ಸಾದ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಇಂದು ಎಲ್ಲರ ಮನೆ ಬಾಗಿಲಿಗೆ ನಿಂತಂತಿದೆ. ಇದಕ್ಕೆ ಇಂದು ನಾವು ಸೇವಿಸುವ ಆಹಾರ ಕೂಡ ಒಂದು ಕಾರಣವಾಗಿರಬಹುದು ಎಂದು ಹೇಳುತ್ತಾರೆ ಯೋಗ ತರಬೇತುದಾರ ಚೇತನ್ ಗುರೂಜಿ. ಹಿಂದೆ ಗಾಣದಿಂದ ತೆಗೆದ ಎಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಿದ್ದೆವು, ಮನೆಯಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಸಾಲ ಪದಾರ್ಥಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಆಹಾರದಲ್ಲಿ ವಿವಿಧ ಕಂಪನಿಗಳ ಪ್ಯಾಕೆಟ್ ಎಣ್ಣೆ ಬಳಸುತ್ತಿದ್ದೇವೆ. ಇದು ಮನುಷ್ಯರ ಆರೋಗ್ಯದ ಮೇಲೆ ಎಷ್ಟು ಮಾರಣಾಂತಿಕ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಹಾಗೆಯೇ ಇಂದು ನಾವು ಬಳಸುವ ಎಲ್ಲ ಮಸಾಲೆಗಳು ಪ್ಯಾಕೆಟ್‌ನಲ್ಲಿಯೇ ಬರುತ್ತಿವೆ. ಇಂದು ಎಲ್ಲರೂ ಇದನ್ನೇ ಬಳಸುತ್ತಿದ್ದಾರೆ. ದೇಸಿ ತಳಿಯ ಹಸುವಿನ ಹಾಲಿನ ಬದಲಿಗೆ ವಿದೇಶಿ ತಳಿಯ ಹಸುಗಳು ಹಾಲನ್ನು ಸೇವಿಸುತ್ತಿದ್ದೇವೆ. ಈ ಬಗ್ಗೆ ಆಹಾರ ಇಲಾಖೆ, ಆಹಾರ ಗುಣಮಟ್ಟ ಸಂಶೋಧನಾ ಇಲಾಖೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಾರೆ.