ಜಿಲ್ಲೆ

ಯುವ ಜನರು ಜ್ಞಾನದ ಸಮಗ್ರತೆ ಖಚಿಪಡಿಸಿಕೊಳ್ಳಲಿ

 ಮೈಸೂರು: ಯುವ ಜನರು ಜ್ಞಾನದ ಸಮಗ್ರತೆಯನ್ನು ಖಚಿತ ಮತ್ತು ಮನುಷ್ಯನ ವ್ಯಕ್ತಿತ್ವದ ಸಮಗ್ರತೆಯನ್ನು ಖಾತರಿ ಪಡಿಸಿಕೊಳ್ಳಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಬನ್ನಿಮಂಟಪದಲ್ಲಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿತ್ವವನ್ನು ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು. ಏಕೆಂದರೆ ಅದು ನಮ್ಮ ನಾಗರಿಕತೆಯ ಅಡಿಪಾಯ ಎಂದರು.

ಯುವ ಜನರ ಮನಸ್ಸು ರೋಮಾಂಚನಕಾರಿ, ಸೃಜನಶೀಲದೃಷ್ಟಿ, ವಿಮರ್ಶಾತ್ಮಕತೆ, ಸೂಕ್ಷ್ಮಅಭಿರುಚಿಗಳು ಮತ್ತು ಉದಾತ್ತ ಗುರಿಯತ್ತ ಹಾತೊರೆಯುತ್ತಿದೆ. ಇದು ಸಾಧ್ಯವಾಗಿರುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣದೊಂದಿಗೆ ಜ್ಞಾನ ಮತ್ತು ಕೌಶಲವನ್ನು ಯುವ ಜನರು ಮೈಗೂಡಿಸಿಕೊಳ್ಳಬೇಕು ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ತ್ವರಿತವಾಗಿ ಬದಲಾಗುತ್ತಿದೆ. ಜತೆಗೆ, ಇದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಯುವ ಜನರು ಇದಕ್ಕೆ ಹೊಂದಿಕೊಳ್ಳಬೇಕು. ಇದನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿ ಜೀವನ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಬೇಕು. ಇಲ್ಲವಾದರೆ, ಹಿಂದುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮನ್‌ಪ್ರೀತ್ ಸಿಂಗ್ ಮನ್ನಾ ಮಾತನಾಡಿ, ವಿದ್ಯಾದೇಗುಲದಲ್ಲಿ ಕಲಿತ ಮೌಲ್ಯಗಳು ಯಾವತ್ತಿಗೂ ಜತೆಗೆ ಇರುತ್ತವೆ. ಶಿಕ್ಷಣದೊಂದಿಗೆ ಮೌಲ್ಯ ಸಹ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು ಧರ್ಮಕ್ಷೇತ್ರದ ಡಾ.ಬರ್ನಾಡ್ ಮೋರಾಸ್ ಮಾತನಾಡಿ, ಪ್ರಾಮಾಣಿಕತೆ, ಸೇವಾ ಮನೋಭಾವ, ಹಾಗೂ ಸಾಮಾಜಿಕ ಪ್ರಜ್ಞೆ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

406 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 183 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಯಿತು. ಪ್ರತಿಭಾವಂತ 45 ವಿದ್ಯಾರ್ಥಿಗಳಿಗೆ (34 ಸ್ನಾತಕ, 11 ಸ್ನಾತಕೋತ್ತರ) ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಡಾ.ರವಿ ಸಲ್ಡಾನ್ಹಾ, ಗುರುಗಳಾದ ಡಾ.ಲೂರ್ದ್ ಪ್ರಸಾದ್, ಜ್ಞಾನ ಪ್ರಗಾಸಂ, ಆಡಳಿತಾಧಿಕಾರಿ ಡೇವಿಡ್ ಸಾಗರರಾಜ್ ಸೇರಿದಂತೆ ಇನ್ನಿತರರಿದ್ದರು.