ಚಿತ್ರದುರ್ಗ: ಪಾಶ್ಚಿಮಾತ್ಯ ಸಂಸ್ಕೃತಿ ಕಡೆ ವಾಲುತ್ತಿರುವ ಯುವ ಜನರಿಗೆ ನಮ್ಮ ಸಂಸ್ಕೃತಿ,ಸಂಸ್ಕಾರದ ಮಹತ್ವದ ಕುರಿತಂತೆ ಅರಿವು ಮೂಡಿಸ ಬೇಕಿದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ನಗರದ ಲಾಸಿಕಾ ಫೌಂಡೇಶನ್ ತರಾಸು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಭರತನಾಟ್ಯ ಕಲಾವಿದೆಯರಾದ ಬಿ.ಎಂ.ಸೃಷ್ಠಿ ಹಾಗೂ ಬಿ.ಎಂ.ಸಿಂಧು ಅವರ ರಂಗಪ್ರವೇಶ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಅವರು, ಪಾಲಕರು, ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ರೂಢಿಸಬೇಕು. ಭರತನಾಟ್ಯದಂಥ ಕಲಾಪ್ರಕಾರಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಲೆಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಇದಕ್ಕೆ ವಿವಿಧ ಕಲಾ ಸಾಧಕರು ಕಾರಣರಾಗಿದ್ದಾರೆ ಎಂದರು. ವಿಧುಷಿ ಶ್ವೇತಾ ಮಂಜುನಾಥ್ ಅವರು ಕಾರ‌್ಯಕ್ರಮ ಉದ್ಘಾಟಿಸಿದರು. ವಿ ದ್ಯಾವಿಕಾಸ ವಿದ್ಯಾಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯಕುಮಾರ್,ಜಿಲ್ಲಾ ಶರಣ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮತ್ತಿತರರು ಇದ್ದರು.
ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮದ ಅಂಗವಾಗಿ ವರ್ಣನೃತ್ಯವನ್ನು ಕನ್ನಡದಲ್ಲಿ ಸಂಯೋಜಿಸಲಾಗಿತ್ತು. ರಾಮಾಯಣದ ಕಥಾ ಭಾಗ ಮತ್ತಿತರ ನೃತ್ಯಗಳಿಗೆ, ವಿದ್ವಾನ್‌ರೋಹಿತ್‌ಭಟ್ ಹಾಡುಗಾರಿಕೆ, ನಾಗೇಂದ್ರ ಪ್ರಸಾದ್ ಮೃದಂಗ ಹಾಗೂ ಶಶಾಂಕ್‌ಜೋಡಿದಾರ್ ಕೊಳಲುವಾದನ, ಸಾಯಿವಂಶಿ ರಿಧಮ್‌ಪ್ಯಾಡ್ ಹಾಗೂ ವಿಭೂದೇಂದ್ರಸಿಂಹ ಅವರು ಪೀಟಿಲು ವಾದನದ ಸಾಥ್ ನೀಡಿದರು. ಗುರು ಶ್ವೇತಾಮಂಜುನಾಥ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
(ಕಬೀರ ಶ್ರೀ ಮಗ್‌ಶಾಟ್)