ಜಿಲ್ಲೆ

ಯುವ ಕವಿಗಳು ಸ್ವಯಂಶೈಲಿ ರೂಢಿಸಿಕೊಳ್ಳಲಿ - ಡಾ.ಗೀತಾಂಜಲಿ ಕುರುಡಗಿ

ಬೆಳಗಾವಿ: ಸಾಹಿತ್ಯ ರಚಿಸುವವರಿಗೆ ಪರಂಪರೆ ಅರಿವು ಅವಶ್ಯವಾದರೆ, ಹೊಸದಾಗಿ ಬರೆಯುವ ಕವಿಗಳು ಭಾಷಾ ಬಳಕೆಯ ವಿವಿಧ ಸಾಧ್ಯತೆಗಳ ಕುರಿತು ಆಲೋಚಿಸಬೇಕು ಎಂದು ಚಿಂತಕಿ, ಪ್ರಾಧ್ಯಾಪಕಿ ಡಾ.ಗೀತಾಂಜಲಿ ಕುರುಡಗಿ ತಿಳಿಸಿದರು.

ನಗರದ ಮಾನವ ಬಂಧುತ್ವ ವೇದಿಕೆ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕ ಈಚೆಗೆ ಆಯೋಜಿಸಿದ್ದ ಪಲ್ಲವಿ ಕಾಂಬಳೆ ಅವರ ಚೊಚ್ಚಲ ಕವನ ಸಂಕಲನ ನನ್ನವರ ಒಡಲುರಿ ಬಿಡುಗಡೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಡಾ.ವಿನಯ ನಂದಿಹಾಳ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯುವ ಕವಿಗಳು ಯಾರನ್ನೂ ಅನುಕರಿಸದೆ ತಮ್ಮದೇ ಶೈಲಿ ರೂಢಿಸಿಕೊಳ್ಳಬೇಕು ಎಂದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಪ್ರತಿಭೆ ಯಾರ ಸ್ವತ್ತು ಅಲ್ಲ. ಆಸಕ್ತಿ, ಛಲ ಮತ್ತು ಅಭ್ಯಾಸ ಬಲದಿಂದ ಯಾರಾದರೂ ಸಾಧನೆ ಮಾಡಬಲ್ಲರು. ಇದಕ್ಕೆ ಪಲ್ಲವಿ ಅವರೇ ಸಾಕ್ಷಿ ಎಂದರು.

ಯುವ ಕವಿ ನದೀಮ್ ಸನದಿ, ಸಂಕಲನದ ಕವಿತೆಗಳನ್ನು ವಿಶ್ಲೇಷಿಸಿದರು. ಡಾ.ಬಾಲಕೃಷ್ಣ ನಾಯಕ, ಡಾ.ಮಂಜುನಾಥ ಪಾಟೀಲ ಕ್ರಾಂತಿಗೀತೆ ಪ್ರಸ್ತುತಪಡಿಸಿದರು. ಡಾ.ವಿನಯ ನಂದಿಹಾಳ, ಕವಯತ್ರಿ ಪಲ್ಲವಿ, ಡಾ.ರಾಮಕೃಷ್ಣ ಮರಾಠೆ, ಬಿ.ಎಸ್.ಗವಿಮಠ, ಡಾ. ಮಹೇಶ ಗಾಜಪ್ಪನವರ, ರಾಹುಲ್ ಮೇತ್ರಿ, ಡಾ. ರಾಧಾ ಎಂ.ಎನ್., ಡಾ. ಆನಂದ, ಡಾ.ಸಾಹುಕಾರ ಕಾಂಬಳೆ, ಡಾ. ಚಿಕ್ಕಮಠ, ಡಾ. ಸುರೇಶ ಗಂಗೋತ್ರಿ, ಡಾ. ಅಪ್ಪಣ್ಣ ಜಿನರಾಳ, ರಾಮನಾಥ ಬನಶಂಕರಿ, ಮನೋಹರ ಕಾಂಬಳೆ, ಶಿವರಾಜ ಕಾಂಬಳೆ, ಪ್ರಿಯಾಂಕಾ ಉಪ್ಪಾರ, ಅಶ್ವಿನಿ ಪಾಂಡ್ರೊಳೆ, ಡಾ.ಶ್ರೀಕಾಂತ ಮುಚ್ಚಂಡಿ, ಡಾ.ಸತೀಶ ನಾಯಕ, ಮಹಾದೇವಿ ಹುಣಸಿಬೀಜ ಇದ್ದರು.

ದೇಮಣ್ಣ ಸೊಗಲದ ನಿರೂಪಿಸಿದರು. ಶಂಕರ ಬಾಗೇವಾಡಿ ಸ್ವಾಗತಿಸಿದರು. ಕವಿ ರಾಜು ಸನದಿ ವಂದಿಸಿದರು.