ಜಿಲ್ಲೆ

ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಧಾರವಾಡ: ಮಲೆನಾಡಿನ ಅಂಚಿನಲ್ಲಿರುವ ಕಲಕೇರಿ ಸಂಗೀತ ವಿದ್ಯಾಲಯದ ವಾತಾವರಣ ಕಲೆ, ಸಾಹಿತ್ಯ, ಸಂಗೀತಕ್ಕೆ ಅತ್ಯಂತ ಪ್ರಸಕ್ತ ವಾತಾವರಣ ಎಂದು ಹಿರಿಯ ಗಾಯಕ ಪಂ. ಸೋಮನಾಥ ಮರಡೂರ ಅಭಿಪ್ರಾಯ ಪಟ್ಟರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸಂಗೀತ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಕಲಕೇರಿ ಸಂಗೀತ ವಿದ್ಯಾಲಯದ ಕೊಡುಗೆ ಅಮೂಲ್ಯವಾದುದು. ಇಂತಹ ಸ್ಥಳದಲ್ಲಿ ಯುವ ಸೌರಭ ಮೂಲಕ ಯುವಕರಲ್ಲಿನ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿ, ಅಖಂಡ ಕರ್ನಾಟಕದ ಸರ್ವ ಕಲೆಗಳನ್ನು ಅದರಲ್ಲೂ ಗ್ರಾಮೀಣ ಕಲೆಗಳನ್ನು ಒಗ್ಗೂಡಿಸಿ ಭಾರತೀಯ ಸಂಸ್ಕೃತಿ ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗ್ರಾಮೀಣ ಕಲೆ ಉಳಿಸಿ, ಬೆಳೆಸಲು ಪ್ರೋತ್ಸಾಹಿಸುತ್ತಿದೆ. ಈ ಎಲ್ಲ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರಾಗಿ ಬೆಳೆಯಲಿ ಎಂದು ಹಾರೈಸಿದರು.
ಕಲಕೇರಿ ಗ್ರಾಪಂ ಅಧ್ಯಕ್ಷ ಸೋಮು ದುರ್ಗಾಯಿ, ಕಲಕೇರಿ ಸಂಗೀತ ವಿದ್ಯಾಲಯದ ಸಂಸ್ಥಾಪಕ ಮ್ಯಾಥ್ಯೂ ಪೋರ್ಟಿಯರ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಭೀಮವ್ವ ಮರೆವಾಡ, ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಆಡಂ ವುಡ್ವರ್ಡ್, ಅಗಾತ್ ಪೋರ್ಟಿಯರ್, ಹಿರಿಯ ಕಲಾವಿದ ವೀರಣ್ಣ ಪತ್ತಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಇತರರು ಇದ್ದರು.
ಕಾರ್ಯಕ್ರಮದಲ್ಲಿ ಸುಕನ್ಯಾ ಬಡಿಗೇರ ವೃಂದದಿಂದ ಸುಗಮ ಸಂಗೀತ, ಮುತ್ತುರಾಜ ಮದನಭಾವಿ ತಂಡದಿಂದ ಜಾನಪದ ಸಂಗೀತ, ಭಾಗ್ಯಶ್ರೀ ಗಾಳೆಮ್ಮನವರ ತಂಡದಿಂದ ಸಮೂಹ ನೃತ್ಯ, ದೇವಕ್ಕ ಲಮಾಣಿ ತಂಡದಿಂದ ಲಂಬಾಣಿ ನೃತ್ಯ, ಬಸವರಾಜ ಗುಡ್ಡಪ್ಪನವರ ತಂಡದಿಂದ ‘ನಮ್ಮ ಭಾರತ’ ನಾಟಕ ಪ್ರದರ್ಶನ, ಭವಾನಿ ನೃತ್ಯ ಶಾಲೆಯ ವಿಠ್ಠಲ ಪಟ್ಟಣ ತಂಡದಿಂದ ಜಾನಪದ ನೃತ್ಯ ಪ್ರದರ್ಶಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸತೀಶ ಜಾಧವ ವಂದಿಸಿದರು.