ಜಿಲ್ಲೆ

ಯುವ ಕಲಾವಿದರಿಂದ ಸಂಭ್ರಮದ ದಸರಾ

ಚಾಮರಾಜನಗರ: ರಾಜ್ಯ ಸರ್ಕಾರ ಈ ಬಾರಿ ಚಾಮರಾಜನಗರ ದಸರಾ ಕಾರ್ಯಕ್ರಮ ಆಯೋಜಿಸದ ಹಿನ್ನೆಲೆಯಲ್ಲಿ ಯುವ ಕಲಾವಿದರ ಬಳಗದಿಂದ ಆಯೋಜಿಸಿದ್ದ ದಸರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸೋಮವಾರ ಶ್ರೀಮಂಟೇಸ್ವಾಮಿ ಕಂಡಾಯ, ಸತ್ತಿಗೆ ಸೂರಿಪಾನಿ, ತಂಬೂರಿ ಕಲಾವಿದರ ಸಂಗಮದೊಂದಿಗೆ ನೂರಾರು ಜಾನಪದ ಕಲಾವಿದರ ನೇತೃತ್ವದ ಮೆರವಣಿಗೆ ಕಾರ್ಯಕ್ರಮಕ್ಕೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 2013 ರಿಂದ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ದಸರಾವನ್ನು ನಿಲ್ಲಿಸಿದ ಪರಿಣಾಮ ಯುವ ಕಲಾವಿದರ ಬಳಗದಿಂದ ಸ್ವಯಂ ಪ್ರೇರಿತರಾಗಿ ದಸರಾ ಮಹೋತ್ಸವ ಆಚರಣೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿದೆ ಎಂದರು.

ಜಿಲ್ಲೆಯಲ್ಲಿ ಎಂದಿನಂತೆ ಈ ಬಾರಿಯೂ ದಸರಾ ಮಹೋತ್ಸವ ಆಚರಣೆ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸಿ.ಎಂ.ಸಿದ್ದರಾಮಯ್ಯ ಅವರು ಒಲವು ತೋರಲಿಲ್ಲ. ಮುಂದಿನ ವರ್ಷದಿಂದ ದಸರಾ ಮಹೋತ್ಸವ ಆಚರಣೆ ಮಾಡುವ ಸಂಬಂಧ ಎಲ್ಲಾಶಾಸಕರು ಒಗ್ಗೂಡಿ ಮನವಿ ಮಾಡಲಾಗುವುದು. ನಮ್ಮ ಜಿಲ್ಲೆಯ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಯನ್ನು ಜಾನಪದ ಕಲೆಗಳ ತವರೂರು ಎಂದು ಕರೆಯಲಾಗುತ್ತದೆ. ಯುವ ಕಲಾವಿದರ ಬಳಗದಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಕಲಾ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹಲವಾರು ಗಣ್ಯರು ಹಾಗೂ ಜಾನಪದ ಕಲಾವಿದರು ಹಾಜರಿದ್ದರು.

ಗಮನಸೆಳೆದ ಮೆರವಣಿಗೆ:

ಯುವ ಕಲಾವಿದರ ಬಳಗದಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಕಾರ್ಯಕ್ರಮ ಗಮನಸೆಳೆಯಿತು. ನಗರದ ಶ್ರೀಚಾಮರಾಜೇಶ್ವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಸಾಗಿದ ಮೆರವಣಿಗೆ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಎತ್ತಿನಗಾಡಿ, ವೀರಗಾಸೆ, ಶವತಾಂಡವ ನೃತ್ಯ, ಸತ್ತಿಗೆ ಸೂರಿಪಾನಿ, ಕಂಸಾಳೆ, ತಮಟೆ, ನಗಾರಿ, ಸ್ಯಾಕೋ್ಸೆೆನ್ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯುದ್ದಕ್ಕೂ ಯುವಕರು, ಮಹಿಳೆಯರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು. ತಂಬೂರಿ ಮತ್ತು ಸೋಬಾನೆ ಕಲಾವಿದರು ಹಾದಿಯುದ್ದಕ್ಕೂ ಜಾನಪದ ಹಾಡುಗಳನ್ನು ಹಾಡುವ ಮೂಲಕ ಮೆರುಗು ನೀಡಿದರು.

ಹೆಜ್ಜೆ ಹಾಕಿದ ಶಾಸಕ:

ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀಭುವನೇಶ್ವರಿ ವೃತ್ತದವರೆಗೂ ಮೆರವಣಿಗೆಯಲ್ಲಿ ಸಾಗಿಬಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಕಲಾವಿದರೊಂದಿಗೆ ಹೆಜ್ಜೆ ಹಾಕುವ ಮೂಲಕ ದಸರಾ ಸಂಭ್ರಮವನ್ನು ಹೆಚ್ಚಿಸಿದರು. ಕಲಾವಿದರೇ ಆಚರಿಸುತ್ತಿರುವ ಕಾರ್ಯಕ್ರಮದಲ್ಲಿ ಜನಪ್ರತಿಧಿಯೊಬ್ಬರು ಬಂದ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕಲಾವಿದರು ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕಲಾವಿದರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:

ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಯುವ ಕಲಾವಿದರ ಬಳಗದಿಂದ ಸಾಮೂಹಿಕ ಗಾಯನ, ಕೈಲಾಶ್ ಮೂರ್ತಿ ಮತ್ತು ತಂಬೂರಿ ಮಹೇಶ್ ತಂಡದಿಂದ ಜಾನಪದ ಗೀತೆ ಗಾಯನ, ಅಂಬಳೆ ರಂಗಯ್ಯ ತಂಡದಿಂದ ತತ್ವಪದ ಗಾಯನ, ಸುಶೀಲಾ ರಾಮಸಮುದ್ರ ಮತ್ತು ಸಿದ್ದರಾಜು ಅವರಿಂದ ಹೋರಾಟದ ಹಾಡುಗಳ ಗಾಯನ, ವಿವಿಧ ಕಲಾತಂಡಗಳಿಂದ ಚಲನಚಿತ್ರಗೀತೆಗಳ ಗಾಯನ, ನೃತ್ಯ ಹಾಗೂ ಇನ್ನಿತರೆ ಮನರಂಜನೀಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಿತು.

ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ 2 ದಿನಗಳ ಕಾಲ ದಸರಾ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷ ಚಾಮರಾಜನಗರ ದಸರಾ ಮಾಡಲಿಲ್ಲ ಅಂದರೇ, ನಾವು ಕಲಾವಿದರೆಲ್ಲಾ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ.

-ಶಿವಶಂಕರ್ ಚಟ್ಟು, ಸದಸ್ಯ, ಜಿಲ್ಲಾ ಯುವ ಕಲಾವಿದರ ಬಳಗ, ಚಾಮರಾಜನಗರ