ಜಿಲ್ಲೆ

ಯುವ ಕಲರವಕ್ಕೆ ತೆರೆ

ನಗರದಲ್ಲಿ 4 ದಿನಗಳಿಂದ ಎಲ್ಲಿ ನೋಡಿದರಲ್ಲಿ ಯುವಕರ ಕಲರವ. ರಾಜ್ಯ ಮಾತ್ರವಲ್ಲದೆ ಅನ್ಯ ರಾಜ್ಯಗಳ ಯುವಕರೂ ಆಗಮಿಸಿದ್ದರಿಂದ ಒಂದು ರೀತಿ ಸರ್ವ ಜನಾಂಗದ ಸಮಾಗಮದಂತಾಗಿತ್ತು. ದೇಶದ ನಾನಾ ಮೂಲೆಗಳಿಂದ ಆಗಮಿಸಿದ ಯುವಕರು ತಮ್ಮ ತಮ್ಮ ರಾಜ್ಯದ ಕಲೆ, ಸಂಸ್ಕೃತಿಯನ್ನು ತೆರೆದಿಡುವ ಮೂಲಕ 26ನೇ ರಾಷ್ಟ್ರೀಯ ಯುವ ಜನೋತ್ಸವ ಜನಮನ ಸೂರೆಗೊಂಡಿತು.
ಜ. 12ರಿಂದ ನಗರದಲ್ಲಿ ಆರಂಭವಾಗಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ತಮ್ಮ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ ಪರಿಚಯಿಸುವುದರ ಜತೆಗೆ ಧಾರವಾಡ ಪರಿಸರವನ್ನೂ ಆಸ್ವಾದಿಸಿದರು. ಖ್ಯಾತ ಗಾಯಕರ ಸಂಗೀತ, ನೃತ್ಯಗಳಿಗೆ ಸಹ ಹೆಜ್ಜೆ ಹಾಕಿ ಇಡೀ ಉತ್ಸವವನ್ನು ಸಂಭ್ರಮಿಸಿದ್ದಾರೆ. ಇಂತಹ ಸಂಭ್ರಮದ ಯುವ ಜನೋತ್ಸವಕ್ಕೆ ಸೋಮವಾರ ತೆರೆ ಬಿದ್ದಿದೆ.
ಯುವಕರಲ್ಲಿನ ಪ್ರತಿಭೆ ಗುರುತಿಸುವುದು ಮಾತ್ರವಲ್ಲದೆ, ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ, ಭ್ರಾತೃತ್ವ, ಧೈರ್ಯ ಮತ್ತು ಸಾಹಸ ಪರಿಕಲ್ಪನೆ ಮೂಡಿಸುವುದೇ ಯುವ ಜನೋತ್ಸವದ ಉದ್ದೇಶ. ಈ ಉತ್ಸವದಲ್ಲಿ ಯುವಕರು ತಮ್ಮ ಅನುಭವ ಮತ್ತು ಆಶೋತ್ತರಗಳ ಬಗ್ಗೆ ಚರ್ಚಿಸಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆ ನೀಡುವುದರ ಜತೆಗೆ ಮನರಂಜನೆಗೂ ಅವಕಾಶ ನೀಡಲಾಗಿತ್ತು.
ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಯುವಕರು ಪ್ರದರ್ಶಿಸಿದ ಸಮರ ಕಲೆಗಳು ಮೈ ನವಿರೇಳಿಸುವಂತೆ ಮಾಡಿತ್ತು. ಪಂಜಾಬಿನ ಗಟ್ಕಾ, ಮಣಿಪುರದ ಮುಕ್ನಾ ಹಾಗೂ ತಾಂಗ್ಟಾ ಸಾಹಸ ಪ್ರದರ್ಶನ ಸ್ಥಳೀಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು. ಇನ್ನು ಕವಿವಿ ಆವರಣದಲ್ಲಿನ ಹಸರು ಉದ್ಯಾನದಲ್ಲಿನ ಚಿತ್ರಕಲೆ, ಕ್ಲೇ ಮಾಡಲಿಂಗ್, ಗುಡ್ಡಗಾಡು ಪ್ರದೇಶದ ಸೈಕ್ಲಿಂಗ್, ಕೆಲಗೇರಿಯಲ್ಲಿನ ಜಲ ಕ್ರೀಡೆಗಳು, ಸೇನೆಯ ಶಸ್ತ್ರಾಸ್ತ್ರ ಬಳಕೆ ಮಾಹಿತಿ ಸೇರಿ ಅನೇಕ ಪ್ರದರ್ಶನಗಳ ಜತೆಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆಹಾರಗಳ ಸ್ವಾದ ಸಹ ಸವಿಯುವಂತಿತ್ತು.
ಹೀಗೆ ಸುಮಾರು 5 ದಿನಗಳ ಕಾಲ ಯುವಕರಲ್ಲಿ ಸ್ಫೂರ್ತಿ ತುಂಬುವುದರ ಜತೆಗೆ ಮನರಂಜನೆ ನೀಡಿದ ಯುವ ಜನೋತ್ಸವ ಯುವಕರಲ್ಲಿ ಹೊಸ ಉತ್ಸಾಹವನ್ನೇ ಮೂಡಿಸಿದೆ. ಸೋಮವಾರ ಯುವ ಜನೋತ್ಸವಕ್ಕೆ ತೆರೆ ಬೀಳಬಹುದು. ಆದರೆ, ಇದು ಬದುಕಿನಲ್ಲಿ ಸಾಧನೆಗೆ ಮುನ್ನುಡಿ ಬರೆದಿದೆ. ದೇಶದ ಯುವಕರ ಮನಸ್ಸಿನಲ್ಲಿ ಧಾರವಾಡ ಅಚ್ಚಳಿಯದೇ ಉಳಿಯುವಂತೆ ಮಾಡಿರುವುದು ನಮ್ಮ ಹೆಮ್ಮೆ.
------ಬಾಕ್ಸ್----
ಮನರಂಜನೆ ಆಸ್ವಾದಿಸಿದ ಯುವ ಪಡೆ
ಮೊದಲ ದಿನವಾದ ಗುರುವಾರ ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಯುವ ಜನೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿದ್ದರು. ಅದೇ ದಿನ ರಾತ್ರಿ ಕೆಸಿಡಿ ಮೈದಾನದಲ್ಲಿ ಗಾಯಕ ವಿಜಯ ಪ್ರಕಾಶ ಗಾಯನ ಹಾಗೂ ಅಯಾನ್ ನೃತ್ಯ ತಂಡದ ಭರ್ಜರಿ ಪ್ರದರ್ಶನಕ್ಕೆ ಯುವಕರು ಮನಸೋತರು. ನಂತರದ ದಿನಗಳಲ್ಲಿ ಸ್ಟಾಕೆಟೋ ತಂಡ, ಥೈಕುಡಂ ಬ್ರಿಡ್ಜ್, ಮೆಮೆ ಖಾನ್ ಗಾಯನ, ಎಂಜೆ 5 ತಂಡದ ನೃತ್ಯ, ಖತ್ವಿಜ್ ಡಿಜೆ, ವಿ ಕಂಪನಿ ಹಾಗೂ ಆಲ್ ಓಕೆ ತಂಡದ ಸಂಗೀತ ಪ್ರದರ್ಶನಕ್ಕೆ ಯುವಕರು ಧ್ವನಿಗೂಡಿಸಿ ಹೆಜ್ಜೆ ಹಾಕಿದರು. ಕೊನೆ ದಿನವಾದ ಸೋಮವಾರ ರಾತ್ರಿ ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ಗಾಯನ ಹಾಗೂ ಭರತನಾಟ್ಯ ಕಲಾವಿದೆ ನಿರುಪಮಾ ರಾಜೇಂದ್ರ ಪ್ರದರ್ಶನ ಮೂಲಕ ಉತ್ಸವ ಸಂಪನ್ನವಾಗಿದೆ.