ಜಿಲ್ಲೆ

ಯುಪಿಗೆ ಹೊರಟಿದ್ದ 131 ಕಾರ್ವಿುಕರ ರಕ್ಷಣೆ

ಹುಬ್ಬಳ್ಳಿ: ಬರೋಬ್ಬರಿ 131 ಕಾರ್ವಿುಕರನ್ನು ತುಂಬಿಕೊಂಡು ಬೆಂಗಳೂರಿನಿಂದ ಉತ್ತರ ಪ್ರದೇಶ ಕಡೆಗೆ ಹೊರಟಿದ್ದ 2 ಕಂಟೇನರ್​ಗಳನ್ನು ಬೆಂಡಿಗೇರಿ ಠಾಣೆ ಪೊಲೀಸರು ಇಲ್ಲಿನ ಗಬ್ಬೂರು ಬಳಿ ಸೋಮವಾರ ತಡೆದು, ಕಾರ್ವಿುಕರನ್ನು ರಕ್ಷಿಸಿದ್ದಾರೆ.

ಬೆಂಗಳೂರಿನಲ್ಲಿ ಕಟ್ಟಡ, ರಸ್ತೆ ಕಾಮಗಾರಿ ಮಾಡಿಕೊಂಡಿದ್ದ ಕೂಲಿ ಕಾರ್ವಿುಕರು ತವರಿಗೆ ತೆರಳಲು ಕಂಟೇನರ್ ಸಹಾಯ ಕೇಳಿದ್ದರು. ಕಂಟೇನರ್​ಗಳ ಚಾಲಕರು ಡೀಸೆಲ್ ಹಾಕಿಸಿದರೆ ನಿಮ್ಮನ್ನು ಊರಿಗೆ ಬಿಡುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೊರಟಿದ್ದರು.

ಕಂಟೇನರ್ ಮುಂಭಾಗದಲ್ಲಿ ಸರಕು ಸಾಗಣೆ ಲಾರಿ ಪಾಸ್ ಅಂಟಿಸಿಕೊಂಡು ಚೆಕ್​ಪೋಸ್ಟ್​ಗಳಲ್ಲಿ ತಪ್ಪಿಸಿಕೊಂಡು ಬಂದಿದ್ದರು. ಬಾಗಲಕೋಟೆ ಮಾರ್ಗವಾಗಿ ವಿಜಯಪುರ ಕಡೆಗೆ ತೆರಳಿದ್ದರು. ಅಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ತಡೆದು ವಾಪಸು ಕಳಿಸಿದ್ದರು. ಇನ್ನು ಮುಂದೆ ಹೋಗುವುದು ಅಸಾಧ್ಯ ಎಂದು ತಿಳಿದ ಕಾರ್ವಿುಕರು ವಾಪಸು ಬೆಂಗಳೂರಿಗೆ ಹೋಗಲೆಂದು ಹುಬ್ಬಳ್ಳಿ ಕಡೆಗೆ ಬಂದಾಗ ಬೆಂಡಿಗೇರಿ ಠಾಣೆ ಪೊಲೀಸರು ಪತ್ತೆಹಚ್ಚಿ ಕಂಟ್ರೋಲ್ ರೂಂ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದರು. ಬಳಿಕ ಎಲ್ಲ ಕಾರ್ವಿುಕರಿಗೆ ಹಳೇ ಗಬ್ಬೂರಿನ ಸಿಟಿ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಿದರು.

ತವರಿಗೆ ತೆರಳಲು ವ್ಯವಸ್ಥೆ ಮಾಡಿ ಎಂದು ಜಿಲ್ಲಾಡಳಿತಕ್ಕೆ ಕಾರ್ವಿುಕರು ಮನವಿ ಮಾಡಿದ್ದಾರೆ.

ಹಸಿವು ನೀಗಿಸಿದ ಗಬ್ಬೂರು ಜನ

ಕಾರ್ವಿುಕರು ತೀವ್ರ ಹಸಿವಿನಿಂದ ಬಳಲಿದ್ದರು. ಹೊಸ ಗಬ್ಬೂರು, ಹಳೇ ಗಬ್ಬೂರು ಜನರು ಅವರಿಗೆ ಊಟ, ಉಪಾಹಾರ ಕೊಟ್ಟು ಹಸಿವು ನೀಗಿಸಿದರು. ರಾತ್ರಿ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿತು.

ಮಹಿಳೆಯರು, ಮಕ್ಕಳೂ ಇದ್ದರು

ಕಂಟೇನರ್​ನಲ್ಲಿ ಇಬ್ಬರು ಮಹಿಳೆಯರು, ಮೂವರು ಮಕ್ಕಳೂ ಇದ್ದರು. ಉಸಿರುಗಟ್ಟುವಂತೆ ಕಂಟೇನರ್​ನಲ್ಲಿ ತುಂಬಿಕೊಂಡು ಹೊರಟಿದ್ದರು. ಮಕ್ಕಳು ಬಳಲಿದ್ದು, ಆರೋಗ್ಯ ಇಲಾಖೆಯಿಂದ ರಾತ್ರಿ ಕಾರ್ವಿುಕರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.

ನಾಲ್ವರು ಚಾಲಕರ ಬಂಧನ

ಪರಸ್ಪರ ಅಂತರವಿಲ್ಲದೆ 131 ಕಾರ್ವಿುಕರನ್ನು ತುಂಬಿಕೊಂಡು ಹೊರಟಿದ್ದ ಉತ್ತರ ಪ್ರದೇಶ ಮೂಲದ ನಾಲ್ವರು ಕಂಟೇನರ್ ಚಾಲಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, 2 ಕಂಟೇನರ್ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಮ್ಮದ ಸಿಖಂದರ್, ಲ್ತಾನಸಿಂಗ್ ಯಾದವ, ಮುಕೇಶ ಯಾದವ ಹಾಗೂ ಪ್ರೇಮನಗರ ಯಾದವ ಬಂಧಿತರು.

EndFragment