ಜಿಲ್ಲೆ

ಯುನೈಟೆಡ್ ಕಿಂಗ್‌ಡಮ್ ಕಸಾಪಕ್ಕೆ ಆದೀಶ್ ನೇಮಕ

ಬೀದರ್: ಸಿಟಿ ಯೂನಿವರ್ಸಿಟಿ ಆï ಲಂಡನ್‌ನ ಎಂಎಸ್ ಬಿಜಿನೆಸ್ ಮ್ಯಾನೇಜ್‌ಮೆಂಟ್ ಪದವಿ ಸ್ವೀಕಾರ ಸಮಾರಂಭದಲ್ಲಿ ಕನ್ನಡ ಧ್ವಜ ರಾರಾಜಿಸಿ ವಿಶ್ವದ ಗಮನ ಸೆಳೆದ ಗಡಿ ಜಿಲ್ಲೆ ಬೀದರ್‌ನ ಯುವ ಪ್ರತಿಭೆ ಆದೀಶ್ ಡಾ.ರಜನೀಶ್ ವಾಲಿ ಅವರನ್ನು ಯುನೈಟೆಡ್ ಕಿಂಗ್‌ಡಮ್ (ಯುಕೆ) ಕನ್ನಡ ಸಾಹಿತ್ಯ ಪರಿಷತ್ ಯುವ ಗೌರವ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಬ್ರಿಟನ್ ನೆಲದಲ್ಲಿ ಕನ್ನಡಪ್ರೇಮ ಮೆರೆದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆದೀಶ್ ವಾಲಿ ಅವರನ್ನು ಪರಿಷತ್ ಗೌರವ ಸದಸ್ಯತ್ವ ನೀಡಿ ಅಭಿನಂದಿಸಿತ್ತು. ಇದೀಗ ಯುನೈಟೆಡ್ ಕಿಂಗ್‌ಡಮ್ ಕಸಾಪ ಗೌರವ ಸಂಚಾಲಕ ಪದವಿ ಮುಡಿಗೇರಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ದೇಶಗಳಿವೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ವಾಲಿಗೆ ಗೌರವ ಸಂಚಾಲಕರಾಗಿ ನೇಮಕ ಆದೇಶ ಪತ್ರ ವಿತರಿಸಿ, ವಿದೇಶಿ ನೆಲದಲ್ಲಿ ಕನ್ನಡ ಕಂಪು ಪಸರಿಸುವ ಕಾರ್ಯಚಟುವಟಿಕೆ ನಿರಂತರ ನಡೆಸುವಂತೆ ಸೂಚಿಸಿದ್ದಾರೆ.

ಪರಿಷತ್‌ನ ವಿವಿಧ ಚಟುವಟಿಕೆಗಳನ್ನು ವಿದೇಶಗಳಿಗೂ ವಿಸ್ತರಿಸಲಾಗುತ್ತಿದೆ. ಹೊರದೇಶಗಳಲ್ಲಿರುವ ಕನ್ನಡಿಗರನ್ನು ಪರಿಷತ್ ಸದಸ್ಯರಾಗಿ ನೇಮಿಸಿ ಸಮಾವೇಶ, ಸಮ್ಮೇಳನ, ವಿಚಾರ ಸಂಕಿರಣ ಸೇರಿ ವಿವಿಧ ಕಾರ್ಯಕ್ರಮ ಸಂಘಟಿಸಲು ಉದ್ದೇಶಿಸಲಾಗಿದೆ. ಹೊರದೇಶದ ಕನ್ನಡಿಗರನ್ನು ಪರಿಷತ್‌ನೊಂದಿಗೆ ಸಮನ್ವಯ ಸಾಧಿಸಿ ಕಾರ್ಯಚಟುವಟಿಕೆ ಅನುಷ್ಠಾನಗೊಳಿಸಲು ವಾಲಿ ಅವರನ್ನು ನೇಮಿಸಲಾಗಿದೆ ಎಂದು ಡಾ.ಜೋಶಿ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಲಂಡನ್ ಸಿಟಿ ಯೂನಿರ್ವಸಿಟಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದ ವೇಳೆ ಆದೀಶ್ ಅವರು ಕನ್ನಡ ಧ್ವಜ ರಾರಾಜಿಸಿ ಲಂಡನ್ ನೆಲದಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದರು. ಡಾ.ಜೋಶಿ ಅವರು ವಾಲಿ ಕನ್ನಡಾಭಿಮಾನ ಕೊಂಡಾಡಿ ಪರಿಷತ್ ಗೌರವ ಸದಸ್ಯತ್ವ ನೀಡುವ ಜತೆಗೆ ಯುನೈಟೆಡ್ ಕಿಂಗ್‌ಡಮ್ ಯುವ ಗೌರವ ಸಂಚಾಲಕ ಹೊಣೆ ವಹಿಸಿದ್ದಾರೆ. ಆದೀಶ್ ಸದ್ಯ ಲಂಡನ್ ಯೂತ್ ಕೌನ್ಸಿಲ್ ಸದಸ್ಯರಾಗಿ ಕೆಲಸ ಮಾಡುತ್ತಿರುವ ಮೊದಲ ಕನ್ನಡಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.