ಬೇಲೂರು : ನಗರದ ಶ್ರೀಚನ್ನಕೆಶವಸ್ವಾಮಿ ದೇಗುಲ ಸಮೀಪ ಹಾಗೂ ಅಕ್ಕಪಕ್ಕದಲ್ಲಿ ಬೃಹತ್ ಅಕ್ರಮ ಕಟ್ಟಡಗಳ ನಿರ್ಮಾಣ ಸಂಬಂಧ ಆರೋಪಗಳು ಕೇಳಿ ಬರುತಿದ್ದು, ಈ ಬಗ್ಗೆ ಒಂದು ದಿನ ನಿಗದಿ ಪಡಿಸಿ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹೇಳಿದರು.
ಇತಿಹಾಸ ಪ್ರಸಿದ್ದ ಹಳೇಬೀಡು ಹಾಗೂ ಬೇಲೂರು ದೇಗುಲಗಳ ವೀಕ್ಷಣೆಗಾಗಿ ಬುಧವಾರ ಹಾಗೂ ಗುರುವಾರದಂದು ಯುನೊಸ್ಕೋ ತಂಡ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಎಂ,ಎಸ್.ಅರ್ಚನಾ ಬೇಲೂರು ದೇಗುಲಕ್ಕೆ ಭೇಟಿ ನೀಡಿ ಈಗ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, 1953 ರಲ್ಲಿ ಕೇಂದ್ರ ಪುರಾತತ್ವ ಇಲಾಖೆಗೆ ದೇಗುಲದ ರಕ್ಷಣಾ ಜವಾಬ್ದಾರಿ ನೀಡಲಾಗಿದೆ. ಆದರೆ ಪುರಾತತ್ವ ಇಲಾಖೆ ಅಧಿಕಾರಿಗಳು ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಗಮನ ಹರಿಸಬೇಕಿತ್ತು. ಕೆಲವೊಂದು ನೂನ್ಯತೆ ಇದ್ದು ಮತ್ತೊಂದು ದಿನ ಬರುವುದಾಗಿ ಹೇಳಿದ ಅವರು. ದೇಗುಲ ಸಮೀಪ ಹಾಗೂ ಅಕ್ಕಪಕ್ಕದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವವರಿಗೆ ನೊಟೀಸ್ ನೀಡಿದ್ದೇವೆಂದು ಪುರಾತತ್ವ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಪುರಾತತ್ವ ಇಲಾಖೆಯವರು ಕಟ್ಟಡ ಕಟ್ಟುವವರೆಗೂ ಸುಮ್ಮನಿದ್ದು ನಂತರ ನೊಟೀಸ್ ನೀಡುತ್ತಾರೆಂದು ಕೆಲವರು ಆಕ್ಷೇಪವಿದೆ. ದೇಗುಲದ ಬಳಿ ಶೌಚಾಲಯ, ಕುಡಿಯುವ ನೀರು, ಒಂದೆ ರೀತಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣದ ಬಗ್ಗೆ ಪ್ರಸ್ಥಾವನೆ ಹೋಗಿದ್ದು, ಅನುಮತಿ ದೊರೆತ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ ಸೆ.14 ಮತ್ತು 15 ರಂದು ಹಳೇಬೀಡು-ಬೇಲೂರು ದೇಗುಲಕ್ಕೆ ಆಗಮಿಸಲಿರುವ ಯುನೊಸ್ಕೋ ತಂಡ, ಯಾವ್ಯಾವ ಸ್ಥಳ ವೀಕ್ಷಿಸಲಿದ್ದಾರೆ ಎಂಬುದರ ಮೇಲೆ ಮಾಹಿತಿ ಸಿಗಲಿದೆ. ಮತ್ತು ಪುರಾತತ್ವ ಇಲಾಖೆಯವರು ದೇಗುಲದೊಳಗೆ ಕೆಲವೊಂದು ಹೊಸ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೂ ಮಾಹಿತಿಯನ್ನು ಸ್ಥಳೀಯ ಸಮಿತಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೆ ಸಮಸ್ಯೆ ಉಂಟಾಗುವುದಿಲ್ಲ. ನಿವೃತ್ತ ಸೈನಿಕರಿಗೆ ನೀಡಬೇಕಾದ ಭೂಮಿಯನ್ನು ಬೇರೆಯವರಿಗೆ ನೀಡಿರುವ ಬಗ್ಗೆ ಶಾಸಕರಿಂದ ಮೌಖಿಕವಾಗಿ ಆರೋಪ ಬಂದಿದೆ. ಬಗರ್ ಹುಕುಂ ಸಾಗುವಳಿ ಚೀಟಿ ಪಡೆಯಲು 50-53 ಫಾರಂನಲ್ಲಿ ಭೂ ರಹಿತರು ಅರ್ಜಿ ಹಾಕುವಾಗ ಮೀಸಲಿಟ್ಟಿರುವ ಸ್ಥಳದ ಮಾಹಿತಿ ತಿಳಿಯದೆ ಅರ್ಜಿ ಹಾಕಿದ್ದಾರೆ. ಆದರೆ ತಪ್ಪಾಗಿ ಗ್ರಾಂಟ್ ಆಗಿದ್ದರೆ ಅದನ್ನು ರದ್ದುಪಡಿಸಲಾಗುವುದು. ಗ್ರಾಂಟ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನಿರಂತರ ಮಳೆಯಿಂದ ಹಾನಿಯಾಗಿರುವ ಮನೆಗಳ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಬೆಳೆ ಹಾನಿ ಬಗ್ಗೆ 1 ವಾರದೊಳಗೆ ವರದಿ ನೀಡುವಂತೆ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತಹಸೀಲ್ದಾರ್ ರಮೇಶ್, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಚನ್ನಕೆಶವಸ್ವಾಮಿ ದೇಗುಲ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಪುರಾತತ್ವ ಇಲಾಖೆ ಕನ್ಸ್‌ರ್‌ವೇಟೀವ್ ಅಸಿಸ್ಟಂಟ್ ಗೌತಮ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.