ಜಿಲ್ಲೆ

ಯುದ್ಧದಲ್ಲಿ ಭಾಗಿಯಾದೆ ಬುದ್ಧ ಜಗತ್ತಿಗೆ ಬೆಳಕಾದ: ಚಿಂತಕ ಪ್ರೊ.ರಹಮತ್ ತರೀಕೆರೆ

ಮೈಸೂರು: ಬುದ್ಧ ಯುದ್ಧದಲ್ಲಿ ಭಾಯಾಗಿದ್ದರೆ ಭಾರತಕ್ಕೆ ಆತ ದೊರೆಯುತ್ತಿರಲಿಲ್ಲ. ಯುದ್ಧವನ್ನು ಧಿಕ್ಕರಿಸಿದ್ದರಿಂದಲೇ ಜಗತ್ತಿಗೆ ಬುದ್ಧ ಬೆಳಕಾದ ಎಂದು ಚಿಂತಕ ಪ್ರೊ.ರಹಮತ್ ತರೀಕೆರೆ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷತ್ರಿಯರಾಗಿ ಯುದ್ಧ ತ್ಯಜಿಸಿದ ಬುದ್ಧ ಮತ್ತು ಅಶೋಕ ಯುದ್ಧ ವಿರೋಧಿ ಪ್ರತಿಮೆಗಳಾಗಿದ್ದಾರೆ. ಗಡಿಯಲ್ಲಿ ರಾಜಕೀಯ ಯುದ್ಧ, ಗಡಿಯ ಒಳಗಡೆ ಸಾಮಾಜಿಕ ಯುದ್ಧಗಳಿರುವ ತನಕವೂ ಬುದ್ಧ ಬೇಕಾಗುತ್ತಾನೆ ಎಂದರು.

ಸಮಾಜದೊಳಗೆ ಸಮಾನತೆಗಾಗಿ ವರ್ಣ ಪದ್ಧತಿಯ ವ್ಯತ್ಯಾಸದ ವಿರುದ್ಧ ನಿರಂತರವಾಗಿ ಯುದ್ಧ ನಡೆಯುತ್ತಿದೆ. ಸಾಮಾಜಿಕ ಸಮಾನತೆಗಾಗಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು ಯುದ್ಧ ಮಾಡಿದರು. ಗಡಿಯಲ್ಲಿ ಯುದ್ಧಕ್ಕೆ ವಿರಾಮವಾಗಿದೆ. ಸಮಾಜದೊಳಗಿನ ಈ ಯುದ್ಧ ಏಕೆ ಇನ್ನೂ ಸ್ತಬ್ಧವಾಗಿಲ್ಲ..? ಎಂದು ಪ್ರಶ್ನಿಸಿದರು.

ಅಪಮಾನದಲ್ಲಿ ಬೆಂದು ಸಮಾನತೆಗಾಗಿ ಅಂಬೇಡ್ಕರ್ ಅವರು ಹಂಬಲಿಸಿದರು. ಭಾರತವನ್ನು ವಿಶ್ಲೇಷಿಸಿ ಬರೆದ ಬರಹಗಳೆಲ್ಲವೂ ಬಾಬಾ ಸಾಹೇಬರ ಪರೋಕ್ಷ ಆತ್ಮಕತೆಗಳಾಗಿವೆ. ಬುದ್ಧ ಧಮ್ಮಕ್ಕೆ ಮರಳುವುದು ಮತಾಂತರ ಅಲ್ಲ. ಮರಳಿ ಮನೆಗೆ ಎಂಬುದಾಗಿದೆ ಎಂದು ವಿಶ್ಲೇಷಿಸಿದರು.

ಕುವೆಂಪು ಬರೆದ ನಾಡಗೀತೆಗೆ 101 ವರ್ಷಗಳಾಗಿವೆ. ರಾಜ್ಯದಲ್ಲಿ ಧಮ್ಮ ಇದ್ದರೂ ಬೌದ್ಧ ಸಮಾಜ ಇಲ್ಲದ ಕಾರಣದಿಂದ ನಾಡಗೀತೆಯಲ್ಲಿ ಬೌದ್ಧರನ್ನು ಉಲ್ಲೇಖಿಸಿಲ್ಲ ಅನಿಸುತ್ತದೆ. ಬುದ್ಧ ದಲಿತರ ವಿಮೋಚನೆಗಾಗಿ ಮಾತ್ರವಲ್ಲ ಎಲ್ಲರಿಗೂ ಬೇಕಾಗಿದ್ದಾನೆ ಎಂದರು.

ವಾಟ್ಸ್ ಆ್ಯಪ್‌ನಲ್ಲಿ ಬಹಳ ಬುದ್ಧಿವಂತರು ಪ್ರತಿಕ್ರಿಯಿಸುತ್ತಾರೆ. ಅವರಿಗೆ ಹೃದಯವಂತಿಕೆ ಇಲ್ಲ. ತಾಯ್ತನ ಇಲ್ಲದೇ ಸಮಾಜ ಕಟ್ಟಲು ಸಾಧ್ಯವಾಗುತ್ತದೆಯೇ? ಪ್ರಜ್ಞೆ, ಶೀಲ ಮತ್ತು ಮೈತ್ರಿ ಬುದ್ಧರ ಈ ತತ್ವಗಳು ಅನುಸರಣೆ ಅಗತ್ಯವಾಗಿದೆ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ವೈಭವದ ಜೀವನವನ್ನು ತ್ಯಾಗ ಮಾಡಿ ಇಡೀ ಜಗತ್ತಿಗೆ ಬೆಳಕು ನೀಡಿದವರು ಬುದ್ಧ. ಆಸೆಯೇ ದುಃಖಕ್ಕೆ ಮೂಲ ಕಾರಣ. ದುಃಖ ಎನ್ನುವುದು ಇದೆ ಎಂದರೆ ಆ ದುಃಖ ಎನ್ನುವುದು ನಮ್ಮ ಅಸ್ತಿತ್ವದಲ್ಲೇ ಇದೆ. ನಮ್ಮ ಮನಸ್ಸಿನಲ್ಲೇ ಇದೆ. ಅದಕ್ಕೆ ಅವರು 8 ಹೆಜ್ಜೆಗಳ ಬಗ್ಗೆ ಹೇಳಿದ್ದಾರೆ.

ಸರಿಯಾದ ತಿಳಿವಳಿಕೆ, ಸರಿಯಾದ ಉದ್ದೇಶ, ಸರಿಯಾದ ಮಾತು, ಸರಿಯಾದ ನಡವಳಿಕೆ, ಸರಿಯಾದ ಜೀವನದ ರೀತಿಯ ಆಯ್ಕೆ, ಸರಿಯಾದ ಪ್ರಯತ್ನ, ಸರಿಯಾದ ಎಚ್ಚರ, ಸರಿಯಾದ ಕೇಂದ್ರೀಕೃತ ಮನಸ್ಸು ಈ 8 ಹೆಜ್ಜೆಗಳನ್ನು ಜೀವನದಲ್ಲಿ ಮೈಗೂಡಿಸಬೇಕು. ಇದರಿಂದ ಮನಸ್ಸಿನಲ್ಲಿರುವ ಆಸೆ, ದುರಾಸೆ ಎಲ್ಲವೂ ದೂರ ಆಗುತ್ತದೆ ಎಂದು ತಿಳಿಸಿದರು.

ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಡಾ.ಕಲ್ಯಾಣ ಸಿರಿ ಭಂತೇಜಿ, ಅಪಾರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಮಹಾಬೋಧಿ ನಿರ್ದೇಶಕ ಸೇವಾನ ಭಂತೇಜಿ, ಕರ್ನಾಟಕ ಬುದ್ಧ ಧರ್ಮ ಸಮಿತಿಯ ಜಗನ್ನಾಥ, ಅರಿವು ಬುದ್ಧ ಜ್ಞಾನ ಕೇಂದ್ರ ಕೆ.ಆರ್.ಗೋಪಾಲ ಕೃಷ್ಣ, ಇಂದ್ರಮ್ಮ, ನಂಜುಂಡಯ್ಯ, ಡಾ.ಜಗನ್ನಾಥ್, ಅಹಿಂದ ಜವರಪ್ಪ, ಸೋಸಲೆ ಸಿದ್ದರಾಜು ಇನ್ನಿತರರಿದ್ದರು. ಪದ್ಮಪಾಣಿ ಲಲಿತಾ ಕಲಾ ಅಕಾಡೆಮಿ ಬುದ್ಧ ಗೀತೆಗಳನ್ನು ಹಾಡಿದರು.

*5

ಕಲಾಮಂದಿರದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಡಾ.ಕಲ್ಯಾಣ ಸಿರಿ ಭಂತೇಜಿ ಉದ್ಘಾಟಿಸಿದರು. ಪ್ರೊ.ರಹಮತ್ ತರೀಕೆರೆ, ಟಿ.ಎಸ್. ಶ್ರೀವತ್ಸ, ಡಾ.ಪಿ.ಶಿವರಾಜು, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಎಂ.ಡಿ. ಸುದರ್ಶನ್, ಜಗನ್ನಾಥ ಇನ್ನಿತರರಿದ್ದರು.

*6

ಕಲಾಮಂದಿರದಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧ ಭಾವಚಿತ್ರಕ್ಕೆ ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಡಾ.ಕಲ್ಯಾಣ ಸಿರಿ ಭಂತೇಜಿ ಪುಷ್ಪ ನಮನ ಸಲ್ಲಿಸಿದರು. ಪ್ರೊ.ರಹಮತ್ ತರೀಕೆರೆ, ಟಿ.ಎಸ್. ಶ್ರೀವತ್ಸ, ಡಾ.ಪಿ.ಶಿವರಾಜು, ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಎಂ.ಡಿ. ಸುದರ್ಶನ್, ಜಗನ್ನಾಥ ಇನ್ನಿತರರಿದ್ದರು.