ಜಿಲ್ಲೆ

ಯುದ್ಧಕ್ಕೆ ನಿಂತಿದ್ದಾರೆ ರಾಮ, ಹನುಮ !

ಹಾಸನ: ಸಾತ್ವಿಕ ಸ್ವಭಾವಕ್ಕೆ ಹೆಸರಾದ ರಾಮ, ಭಕ್ತಿಯ ಪರಾಕಾಷ್ಠೆಯ ಪ್ರತೀಕವಾಗಿದ್ದ ಹನುಮ ಈಗ ಯುದ್ಧಕ್ಕೆ ಸಿದ್ಧರಾದಂತೆ ಭಾಸವಾಗುತ್ತಿದ್ದಾರೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ಜಾನಪದ ಪರಿಷತ್, ಕಾಲೇಜಿನ ಕನ್ನಡ ವಿಭಾಗದಿಂದ ಏರ್ಪಡಿಸಿದ್ದ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅವರ ’ಇದೇನಾ ಸಂಭವಾಮಿ ಅನ್ನೋದು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮ ಮನೆಯಲ್ಲಿ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತ ಒಟ್ಟಿಗೆ ಇರುವ ಭಾವಚಿತ್ರಗಳು ಕಾಣಸಿಕೊಳ್ಳುತ್ತಿದ್ದವು. ಆದರೆ ಇಂದು ಆ ಎಲ್ಲ ಆದರ್ಶ ಪುರುಷರು ಪ್ರತ್ಯೇಕವಾಗಿ ಗೋಚರಿಸುತ್ತಿದ್ದಾರೆ. ಶ್ರೀರಾಮ ಬಿಲ್ಲು ಬಾಣ ಹಿಡಿದು ಯುದ್ಧಕ್ಕೆ ನಿಂತಿದ್ದಾನೆ. ಭಕ್ತಿಯ ಪರಾಕಾಷ್ಠೆಗೆ ಹೆಸರುವಾಸಿಯಾಗಿದ್ದ ಹನುಮಂತ ಈಗ ಎಲ್ಲರ ಕಾರಿನ ಹಿಂಭಾಗ ರುದ್ರಾವತಾರ ತಾಳಿ ನಿಂತಿದ್ದಾನೆ ಎಂದು ಹೇಳಿದರು.

ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿದ್ದಾರೆ. ಧರ್ಮ ಎಂದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಪೌರುಷ ತೋರುವ ಧಾವಂತದಲ್ಲಿದ್ದಾರೆ. ರಾಷ್ಟ್ರೀಯತೆ ಹಾಗೂ ನವ ರಾಷ್ಟ್ರೀಯತೆ ವಿಚಾರ ಮುನ್ನೆಲೆಗೆ ಬಂದಿದೆ. ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಹೇಳಿದರು.

ಸ್ವಾತಂತ್ರೃ ಉಳಿಸಿಕೊಳ್ಳಿ: ಮಹಿಳೆಯರು ತಮಗೆ ದೊರೆತಿರುವ ಸ್ವಾತಂತ್ರೃ ಉಳಿಸಿಕೊಳ್ಳಬೇಕು. ತಳ ಸಮುದಾಯ ಹಾಗೂ ಮಹಿಳೆಯರನ್ನು ನಿಕೃಷ್ಟವಾಗಿ ಕಂಡಿದೆ. ಆದರೆ ಈಗ ಕಾಲ ಬದಲಾಗಿದ್ದು, ಮಹಿಳೆ ಮತ್ತು ಹಿಂದುಳಿದ ವರ್ಗದವರೂ ಲೋಕ ಆಳಲು ಅರ್ಹರು ಎಂಬುದನ್ನು ಅರಿಯಬೇಕು ಎಂದರು.

ಪ್ರೊ. ಹಿ.ಶಿ. ರಾಮಚಂದ್ರೇಗೌಡ ಅವರ ಇದೇನಾ ಸಂಭವಾಮಿ ಅನ್ನೋದು ಅತ್ಯಮೂಲ್ಯ ಕೃತಿ. ಧರ್ಮ, ಸಮಾಜದಲ್ಲಿನ ಕಂದಾಚಾರ, ಸಾಮಾಜಿಕ ವ್ಯವಸ್ಥೆ ಕುರಿತು ಕೃತಿಕಾರರು ಚೆನ್ನಾಗಿ ವಿವರಿಸಿದ್ದಾರೆ. ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಇದಾಗಿದೆ ಎಂದರು.
ಕೃತಿಕಾರ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ಗುರುರಾಜ್ ಮಾತನಾಡಿದರು. ಸಾಹಿತಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಮೇಟಿಕೆರೆ ಹಿರಿಯಣ್ಣ, ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಕೆ.ಜಿ. ಕವಿತಾ, ಡಾ. ಐ.ಎಂ. ಮೋಹನ್ ಇತರರಿದ್ದರು.