ಜಿಲ್ಲೆ

ಯುಟಿಪಿ ಕಚೇರಿ ಎದುರು ರೈತನ ಆತ್ಮಹತ್ಯೆ ಯತ್ನ

ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ನಿರ್ವಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಇಲ್ಲಿಯ ಯುಟಿಪಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಹಿರೇಕೆರೂರ ತಾಲೂಕಿನ ಮೇದೂರ ಗ್ರಾಮದ ನಾಗರಾಜ ತಳವಾರ ಆತ್ಮಹತ್ಯೆಗೆ ಯತ್ನಿಸಿದ ರೈತ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರೈತರು ಕೂಡಲೆ ರೈತನನ್ನು ರಕ್ಷಿಸಿದ್ದಾರೆ. ರೈತ ನಾಗರಾಜ ಅವರಿಗೆ ಒಟ್ಟು 2.5 ಎಕರೆ ಜಮೀನು ಇದ್ದು, ಅದರಲ್ಲಿ 15 ವರ್ಷದ ಹಿಂದೆಯೇ ಯುಟಿಪಿ ಕಾಲುವೆ ನಿರ್ವಣಕ್ಕಾಗಿ 1.25 ಎಕರೆಯನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಈವರೆಗೂ ನಯಾಪೈಸೆ ಪರಿಹಾರ ನೀಡಿಲ್ಲ. ಇದರಿಂದ ತೀವ್ರವಾಗಿ ಮನನೊಂದ ರೈತ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ.

ಧರಣಿ ಆರಂಭಿಸಿದ ರೈತರು: ಯುಟಿಪಿ ಕಾಲುವೆಗೆ ಜಮೀನು ನೀಡಿದ ರೈತರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಳೆದ 15 ದಿನದ ಹಿಂದೆ 8 ದಿನಗಳ ಕಾಲ ಧರಣಿ ನಡೆಸಿದ್ದರು. ಈ ವೇಳೆ 15 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿ ರೈತರು ಬುಧವಾರ ಮತ್ತೆ ಯುಟಿಪಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದರು.

ಯುಟಿಪಿ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯ, ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಬೀಗ ಜಡಿದು ಪರಿಹಾರದ ಚಕ್ ನೀಡುವವರೆಗೂ ಕಚೇರಿ ಕೆಲಸಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದರು. ನೀರಾವರಿ ಇಲಾಖೆ ಧಾರವಾಡ ಸಿಇಒ, ಹಾವೇರಿ ಜಿಲ್ಲಾಧಿಕಾರಿ ಹಾಗೂ ಯುಟಿಪಿ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.

ವಕೀಲ ಎಸ್.ಡಿ. ಹಿರೇಮಠ ಮಾತನಾಡಿ, ಕಳೆದ ಜನವರಿಯಲ್ಲಿ ವಾರಗಳ ಕಾಲ ಧರಣಿ ನಡೆಸಿದಾಗ, ನೀರಾವರಿ ಇಲಾಖೆ ಧಾರವಾಡ ಸಿಇಒ ಶಶಿಧರ ಬಗಲಿ ‘ರೈತರಿಗೆ ಪರಿಹಾರ ನೀಡುವ ವಿಚಾರವಾಗಿ 850ಕ್ಕೂ ಅಧಿಕ ಪ್ರಕರಣ ಬಾಕಿ ಇದೆ. ಅದಕ್ಕಾಗಿ 52 ಕೋಟಿ ರೂ. ಬಿಡುಗಡೆ ಮಾಡಿಸಿ ಪರಿಹಾರ ನೀಡಲಾಗುವುದು. ಸದ್ಯ ಹದಿನೈದು ದಿನದೊಳಗೆ ಧರಣಿಯಲ್ಲಿ ಕುಳಿತ 36 ರೈತರ ಪ್ರಕರಣಕ್ಕೆ ಸಂಬಂಧಿಸಿ 3.62 ಕೋಟಿ ರೂ. ಬಿಡುಗಡೆ ಮಾಡಲಾಗುವುದು’. ಎಂದು ಭರವಸೆ ನೀಡಿದ್ದರು.

ಇದರಿಂದಾಗಿ ರೈತರು ಧರಣಿ ಹಿಂತೆಗೆದುಕೊಂಡಿದ್ದರು. ಆದರೆ, ಈಗ ಪರಿಹಾರ ಕೇಳಲು ಹೋದರೆ, ಇಲಾಖೆ ಖಾತೆಯಲ್ಲಿ ಹಣವಿಲ್ಲ ಎನ್ನುತ್ತಿದ್ದಾರೆ. ಕಾಯಂ ಭೂ ಸ್ವಾಧೀನಾಧಿಕಾರಿ ನೇಮಕ ಮಾಡುವುದಾಗಿ ಹೇಳಿದ ಜಿಲ್ಲಾಧಿಕಾರಿಯೂ ಮಾತು ತಪ್ಪಿದ್ದಾರೆ. ಆದ್ದರಿಂದ ಪರಿಹಾರದ ಚಕ್ ನೀಡುವವರೆಗೂ ಯಾವುದೇ ಕಾರಣಕ್ಕೂ ಧರಣಿ ಹಿಂತೆಗೆದುಕೊಳ್ಳುವುದಿಲ್ಲ. ಅಗತ್ಯ ಬಿದ್ದರೆ ಉಪವಾಸ ಸತ್ಯಾಗ್ರಹ ಸಹ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ರೈತ ಮುಖಂಡರಾದ ಪ್ರಭುಗೌಡ ಸೊರಟೂರ, ಶರಣಪ್ಪ ಕಾಗೇರ, ಬಸಪ್ಪ ಮಾಳಗಿ, ಬೋಜರಾಜ ಆರೇರ, ನಾಂಗಪ್ಪ ವೆಂಕಣ್ಣನವರ, ಕರಬಸಪ್ಪ ಬನ್ನಿಕೋಡ, ನಿಂಗನಗೌಡ ಸೊರಟೂರ, ಕರೇಗೌಡ ಮತ್ತೂರ, ತುಕಾರಾಮ ನವಲೆ, ಕರಿಯಪ್ಪ ಸೂರಣಗಿ, ಯಲ್ಲಪ್ಪ ಕೋಡಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿನ ಶಿರಗಂಬಿ, ಮೇದೂರ ಸೇರಿ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.