ಜಿಲ್ಲೆ

ಯುಜೆಎಸ್ ಕಪ್ ಕ್ರಿಕೆಟ್ ಟೂರ್ನಿ 17ರಿಂದ

Dharwad

ಹುಬ್ಬಳ್ಳಿ: ಉತ್ತರ ಕರ್ನಾಟಕ ಜನಶಕ್ತಿ ಸೇನೆ ನವನಗರ ಘಟಕದ ವತಿಯಿಂದ ಕೆಎಚ್​ಬಿ ಕಾಲನಿ ಬಳಿಯ ಮೈದಾನದಲ್ಲಿ ಜ. 17ರಿಂದ ಐದು ದಿನಗಳವರೆಗೆ ರಾಜ್ಯ ಮಟ್ಟದ ಯುಜೆಎಸ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗಿದೆ ಎಂದು ಸೇನೆ ಜಿಲ್ಲಾಧ್ಯಕ್ಷ ಸುನಿಲ್ ರೇವಣಕರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಒಂದು ತಂಡವನ್ನು ಟೂರ್ನಿಗೆ ಪರಿಗಣಿಸಲಾಗುವುದು. ಸುಮಾರು 40 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸೇನೆಯಿಂದ ಇದೇ ಮೊದಲ ಬಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಮೊದಲ ಬಹುಮಾನ 1,11,111 ರೂ. ನಗದು, ದ್ವಿತೀಯ 55,555 ನಗದು ಹಾಗೂ ತೃತೀಯ 33,333 ನಗದು ಹಾಗೂ ಪಾರಿತೋಷಕ ನೀಡಲಾಗುತ್ತಿದೆ. ಉತ್ತಮ ಬೌಲರ್, ಬ್ಯಾಟ್ಸಮನ್, ಆಲ್​ರೌಂಡರ್​ಗಳಿಗೆ ತಲಾ 5,555 ರೂ. ಬಹುಮಾನ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಯುಜೆಎಸ್ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಯುಜೆಎಸ್ ಬ್ಲಾಕ್ ಅಧ್ಯಕ್ಷ ಮಲ್ಲಯ್ಯಜ್ಜ ಹಿರೇಮಠ, ಕಾರ್ಯದರ್ಶಿ ಪ್ರವೀಣ ಪೂಜಾರಿ, ಸದಸ್ಯರಾದ ಮನೋಹರ ಜಮಖಂಡಿ, ಗಂಗಾಧರ ಕೊಟಬಾಗಿ, ನಾಗರಾಜ ರೇವಣಕರ, ಇದ್ದರು.