ಕಲಬುರಗಿ: ಕೇಂದ್ರ ಸರ್ಕಾರವೂ ಯುಜಿಸಿ ಕರಡು ನಿಯಮಗಳನ್ನು ತಿದ್ದುಪಡಿ ಮಾಡಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು, ವಿಶ್ವವಿದ್ಯಾಲಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಅಖಿಲ ಭಾರತ ವಿಶ್ವವಿದ್ಯಾಲಯ ನೌಕರರ ಸಂಘದ ಕಾರ್ಯಾಧ್ಯಕ್ಷ ಎಂ.ಬಿ.ಸಜ್ಜನ್ ಆರೋಪಿಸಿದರು. ದೇಶದ ೫೬ ಕೇಂದ್ರೀಯ, ೪೮೧ ರಾಜ್ಯ ವಿಶ್ವವಿದ್ಯಾಲಯಗಳಿದ್ದು, ಅವುಗಳನ್ನು ತನ್ನ ಸುಪರ್ದಿಗೆ ಪಡೆಯಲು ಕರಡು ನೀಯಮ ಬದಲಾವಣೆ ಮಾಡಿದೆ. ಇದರಿಂದ ರಾಜ್ಯ ಸರ್ಕಾರದ ಅಧಿಕಾರ ಮೊಟಕು ಆಗಿ, ರಾಜ್ಯಪಾಲರಿಗೆ ಪರಮಾಧಿಕಾರ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉನ್ನತ ಶಿಕ್ಷಣವನ್ನು ಕೇಂದ್ರೀಕರಣ ಮಾಡಿ, ಕೇಸರೀಕರಣ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಖಾಸಗೀಕರಣಕ್ಕೆ ಇದು ಪೂರಕವಾಗಿದೆ. ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡುವುದನ್ನು ಖಂಡಿಸಿ, ಹೋರಾಟ ನಡೆಸಲು ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮಹಾತ್ಮಜ್ಯೋತಿಬಾ ಫುಲೆ ರೋಹಿಲ್ ಖಂಡ ವಿಶ್ವವಿದ್ಯಾಲಯದಲ್ಲಿ ಸಂಘಟನೆಯ ಸಭೆ ಫೆಬ್ರವರಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಬಸಣ್ಣ ಉದನೂರ, ಗೌರೀಶ ಮಠಪತಿ, ನಾಗಯ್ಯ ಸ್ವಾಮಿ, ರವಿಕುಮಾರ ಟೆಂಗಳಿ ಇತರರಿದ್ದರು.