ಮೂರ್ತಿ ಟಿಸಿಎಸ್ ತಿಪಟೂರು
ನಗರದಲ್ಲಿ ಯುಜಿಡಿ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವ ನಗರಸಭೆ ನೀರಿನ ಸಂಪರ್ಕ ಕಡಿತಗೊಳಿಸಲು ಮುಂದಾಗಿದೆ.
ಯುಜಿಡಿ (ಒಳ ಚರಂಡಿ ವ್ಯವಸ್ಥೆ ) ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ಸಿಕ್ಕಿ 10 ವರ್ಷ ಕಳೆದಿದೆ. 2013ರಲ್ಲಿ ಮೊದಲನೇ ಹಂತ, 2019-20 ರಲ್ಲಿ ಎರಡನೇ ಹಂತದಲ್ಲಿ ನಗರಾದ್ಯಂತ ಒಳ ಚರಂಡಿ ಸಂಪರ್ಕ ಕಲ್ಪಿಸುವ 42 ಕೋಟಿ ರೂ. (ಒಂದನೇ ಹಂತ 18 ಕೋಟಿ ರೂ., ಎರಡನೇ ಹಂತ 24 ಕೋಟಿ ರೂ.) ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗಿ ಕಾಮಗಾರಿ ಬಹುತೇಕ ಮುಗಿದಿದೆ.
ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯ ಮಹತ್ವ ಮತ್ತು ಪ್ರಯೋಜನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ವ್ಯಾಪಕ ಜಾಗೃತಿ ಸಭೆಗಳು ನಡೆದಿವೆ. ಸಂಪರ್ಕ ಪಡೆಯಲು ಪ್ರತೀ ಮನೆಗೆ 6,200 ರೂಪಾಯಿ ನಿಗದಿಪಡಿಸಲಾಗಿದ್ದು, ನಂತರದ ದಿನಗಳಲ್ಲಿ ಪ್ರತಿ ತಿಂಗಳು ಪ್ರತಿ ಸಂಪರ್ಕಕ್ಕೆ 150 ರೂ., ನಿರ್ವಹಣಾ ಶುಲ್ಕ ಪಾವತಿಸಬೇಕೆಂದಿದೆ. (ಸದ್ಯಕ್ಕೆ ಮಾಸಿಕ ಶುಲ್ಕದ ದರ ಅಂತಿಮವಾಗಿಲ್ಲ)
80 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಅಂದಾಜು 9,500 ಯುಜಿಡಿ ಸಂಪರ್ಕ ನಿರೀಕ್ಷಿಸಲಾಗಿದೆ. ಆದರೆ ಯೋಜನೆ ಪ್ರಾರಂಭವಾಗಿ 10 ವರ್ಷ ಕಳೆಯುತ್ತಿದ್ದರೂ 4,900 ಮನೆಗಳು ಯುಜಿಡಿ ಸಂಪರ್ಕ ಪಡೆದಿವೆ.
ನಗರದಂಚಿನ ಕಂಚಾಘಟ್ಟ, ಹಳೇಪಾಳ್ಯ, ದೊಡ್ಡಯ್ಯನ ಪಾಳ್ಯ ಮತ್ತು ಇಂದಿರಾನಗರ, ಗಾಂಧಿನಗರ, ನೆಹರೂ ನಗರದ ಕೆಲ ಭಾಗಗಳಲ್ಲಿ ಯುಜಿಡಿ ಸಂಪರ್ಕ ಪಡೆಯಲು ಹೆಚ್ಚಿನ ನಿರಾಸಕ್ತಿ ಕಂಡು ಬಂದಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ನಿರೀಕ್ಷಿಸುವ ಕೆಲವರು, ಸಂಬಂಧಪಟ್ಟ ವಾರ್ಡ್ ಸದಸ್ಯರ ಮೇಲೆ ಒತ್ತಡ ತಂದು ಉಚಿತವಾಗಿ ಸಂಪರ್ಕ ಕಲ್ಪಿಸಿ ಎನ್ನುತ್ತಿದ್ದಾರೆ.
ಎಲ್ಲವನ್ನೂ ಉಚಿತವಾಗಿ ಕೊಡಲು ಸಾಧ್ಯವಿಲ್ಲದಿದ್ದರೂ, ಜನತೆಗೆ ಅನುಕೂಲ ಮಾಡಿಕೊಡಲು ಮುಂದಾಗಿರುವ ನಗರಸಭೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನ ಬಳಸಿ, ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮತ್ತು ಬಡವರ ಕಲ್ಯಾಣ ಯೋಜನೆಯಡಿ ಶೇ.7.2 ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶೇ.50 ರಿಯಾಯಿತಿಯಲ್ಲಿ ಸಂಪರ್ಕ ಕಲ್ಪಿಸಿಕೊಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ‌್ಯಕ್ರಮಗಳೂ ನಡೆದಿವೆ. ಆದರೆ, ಜನರಿಂದ ನಿರೀಕ್ಷಿತ ಸ್ಪಂದನೆ ದೊರಕದ ಕಾರಣ ಬೇರೆ ದಾರಿ ಇಲ್ಲದೆ ಯುಜಿಡಿ ಸಂಪರ್ಕ ಪಡೆಯಲು ನಿರುತ್ಸಾಹ ತೋರುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಗರದ ಕೆ.ಆರ್. ಬಡಾವಣೆಯ 7 ನೇ ವಾರ್ಡ್ ಸೇರಿ ನಗರದ ಕೆಲ ಬಡಾವಣೆಗಳ ಮನೆಗಳ ನಲ್ಲಿ ನೀರಿನ ಸಂಪರ್ಕ ಮತ್ತು ಡ್ರೈನ್‌ಗೆ ಅಳವಡಿಸಲಾಗಿರುವ ಪೈಪ್‌ಗಳ ಸಂಪರ್ಕ ಕಡಿತಗೊಳಿಸಲು ಆದೇಶಿಸಿದೆ. ಇನ್ನು ಮುಂದಾದರೂ ಜನತೆ ಯೋಜನೆಯ ಯಶಸ್ಸಿಗೆ ಸಹಕರಿಸಲಿ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ.
ತ್ಯಾಜ್ಯ ನೀರು ಚರಂಡಿಯಲ್ಲಿ ಹರಿದರೆ ನಗರಸಭೆಯನ್ನು ಹೊಣೆ ಮಾಡುತ್ತಾರೆ. ಯುಜಿಡಿ ಸಂಪರ್ಕ ಪಡೆಯಲು ಅನುಕೂಲವಾಗಲಿ ಎಂದು ಎಲ್ಲ ವಾರ್ಡ್‌ಗಳಲ್ಲೂ ನೆಟ್‌ವರ್ಕ್ ಕಲ್ಪಿಸಲಾಗಿದೆ. ಆರೋಗ್ಯ ಮತ್ತು ಪರಿಸರ ನೈರ್ಮಲ್ಯದ ದೃಷ್ಟಿಯಿಂದ ಯುಜಿಡಿ ಸಂಪರ್ಕ ಪಡೆಯುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿಸುವುದು ನಾಗರಿಕರ ಜವಾಬ್ದಾರಿ ಮತ್ತು ಕರ್ತವ್ಯ.
ವಿಶ್ವೇಶ್ವರ ಬಡಗದರ ಆಯುಕ್ತ, ನಗರಸಭೆ
ನಾನು ಪ್ರತಿನಿಧಿಸುವ 7ನೇ ವಾರ್ಡ್‌ನಲ್ಲಿ ಯುಜಿಡಿ ಸಂಪರ್ಕ ಪಡೆಯದ 25ಕ್ಕೂ ಹೆಚ್ಚು ಮನೆಗಳ ನಲ್ಲಿ ಸಂಪರ್ಕ ಮತ್ತು ಚರಂಡಿಗೆ ತ್ಯಾಜ್ಯ ನೀರು ಹರಿಸುತ್ತಿದ್ದ ಪೈಪ್‌ಗಳನ್ನು ಮುಚ್ಚಿದ್ದಾರೆ. ಯುಜಿಡಿ ಸಂಪರ್ಕ ಪಡೆಯುವುದು ಎಲ್ಲರ ಜವಾಬ್ದಾರಿ. ಆದರೆ ಸ್ವಲ್ಪ ಕಾಲಾವಕಾಶ ಕೊಡಬೇಕಿತ್ತು.
ಎಂ.ಎಸ್. ಯೋಗೀಶ್ ನಗರಸಭೆ ಸದಸ್ಯ