ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಯುಜಿಡಿ ಕಾಮಗಾರಿಗಳು 10 ವರ್ಷವಾದರೂ ಪೂರ್ಣಗೊಂಡಿಲ್ಲ. ಮೊದಲು ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಿಸದೆಯೇ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಿ ಜನರನ್ನು ಪೇಚಿಗೆ ಸಿಲುಕಿಸಲಾಗಿದೆ. ಅಧಿಕಾರಿಗಳಿಂದ ಅನುಕೂಲ ಆಗಬೇಕೆ ಹೊರತು ಅನಾನುಕೂಲವಲ್ಲ…
ಮಂಗಳವಾರ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಶಾಸಕರಾದ ಎಂ.ಚಂದ್ರಪ್ಪ, ಬಿ.ಜಿ.ಗೋವಿಂದಪ್ಪ ತರಾಟೆ ತೆಗೆದುಕೊಂಡು ಆಕ್ರೋಶ ಹೊರಹಾಕಿದರು.
ಎಸ್‌ಟಿಪಿ ಕೆಲಸ ನಿರ್ವಹಿಸದೆ ನೆಟ್‌ವರ್ಕಿಂಗ್, ಪೈಪ್‌ಲೈನ್ ಮಾಡುವುದು ಎಷ್ಟು ಸರಿ? ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಹೀಗಾಗಿ ಜಿಪಂಗೆ ವಹಿಸಿ ಎಂದು ಎಂ.ಚಂದ್ರಪ್ಪ ಸಲಹೆ ನೀಡಿದರು.
ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ಪಟ್ಟಣದಲ್ಲಿ ಒಳಚರಂಡಿ ನಿರ್ಮಿಸಲು 2007 ಹಾಗೂ 2017ರಲ್ಲಿ ಒಟ್ಟು 24.88 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಯುಜಿಡಿ ನಂತರವೂ ಬಹುತೇಕ ಕಡೆ ಮ್ಯಾನ್‌ವೋಲ್‌ಗಳಿಂದ ಚರಂಡಿ ನೀರು ರಸ್ತೆ, ಬಡಾವಣೆಗಳಲ್ಲಿ ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಇದರಿಂದಾಗಿ ನಾಗರಿಕರಿಗೆ ತೊಂದರೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಡಿ.ಸುಧಾಕರ್ ಮಾತನಾಡಿ, ಮಂಡಳಿಯಿಂದ ಹಿರಿಯೂರಿಗೆ 30 ಕೋಟಿ ರೂ., ಚಳ್ಳಕೆರೆಗೆ 28 ಕೋಟಿ ರೂ., ಮೊಳಕಾಲ್ಮುರಿಗೆ 18 ಕೋಟಿ ರೂ., ನಾಯಕನಹಟ್ಟಿಗೆ 14 ಕೋಟಿ ರೂ. ಅಮೃತ-02 ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಗೆ ನಗರ ಮತ್ತು ಪಟ್ಟಣವಾರು ಪ್ರತ್ಯೇಕವಾಗಿ ಟೆಂಡರ್ ಕರೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಳಲ್ಕೆರೆ, ಹೊಸದುರ್ಗ ಪುರಸಭೆಗೆ ಸಂಬಂಧಿಸಿದಂತೆ ವಿಸೃತ ಯೋಜನಾ ವರದಿ ಸಿದ್ಧಪಡಿಸಿ ಮಂಡಳಿಗೆ ಕಳುಹಿಸಿ. ಶೀಘ್ರ ಮಂಜೂರಾತಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಶೇ. 5ರ ಯೋಜನೆಯಡಿ ಹಿರಿಯೂರು ನಗರದ 7 ಸರ್ಕಾರಿ ಶಾಲೆಗಳಲ್ಲಿ ಅಂಗವಿಕಲರಿಗಾಗಿ ವಿಶೇಷ ಶೌಚಗೃಹ, 63.75 ಲಕ್ಷ ರೂ. ಅನುದಾನದಲ್ಲಿ ನಗರ ವ್ಯಾಪ್ತಿಯ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು ನೀಡಿದ್ದ ಅನುಮತಿ ಹಿಂಪಡೆಯಲಾಯಿತು.
ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಎಸ್ಸಿ ಹಾಗೂ ಎಸ್ಟಿ ವರ್ಗಕ್ಕಾಗಿ ಮೀಸಲಿಟ್ಟ ಶೇ 24.10ರ ಯೋಜನೆಯಡಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಸಬೇಕು ಎಂದು ತಾಕೀತು ಮಾಡಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನೂತನ ತಾಪಂ ಕಚೇರಿಯ ಮೊದಲ ಮಹಡಿಯಲ್ಲಿ ಅಂಗವಿಕಲರಿಗೆ ಸ್ಥಳ ಮೀಸಲಿಡಬೇಕು. ಅವರ ಅನುಕೂಲಕ್ಕಾಗಿ ಲಿಫ್ಟ್ೃ ವ್ಯವಸ್ಥೆ ನಗರೋತ್ಥಾನದ ಅನುದಾನದಲ್ಲಿ ಬಳಸುವಂತೆ ಸೂಚಿಸಿದರು.
ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪುರಸಭೆ ಕಾರ್ಯಾಲಯದ ಪೀಠೋಪಕರಣಗಳ ಖರೀದಿಗೆ ಅನುದಾನ ನೀಡುವಂತೆ ಅಧಿಕಾರಿಗಳಿಗೆ ಹೇಳಿದರು.
ಡಿಸಿ ದಿವ್ಯಾಪ್ರಭು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಮಹೇಂದ್ರಕುಮಾರ್, ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ ಇತರರಿದ್ದರು.