ವಿಜಯಪುರ: ಯುಜಿಸಿ ಮಾರ್ಗಸೂಚಿಯನ್ನು ಪಾಲಿಸುವಂತೆ ವಿಜಯಪುರದ ಹೊರ ವಲಯದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು. ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಒಂದೇ ಪರೀಕ್ಷೆ ನಡೆಸಿ ಎಂಬ ಬೇಡಿಕೆಯೊಂದಿಗೆ AIDSO ಹಾಗೂ ಮಹಿಳಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಹೋರಾಟ ನಡೆಸಿದ್ರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಯದ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ರು. ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿ ವಿಶ್ವವಿದ್ಯಾಲಯವು ಪದವಿಯ 2 ಹಾಗೂ 4ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 2ನೇ ಸೆಮಿಸ್ಟರ್ ಫಲಿತಾಂಶವನ್ನು ಪರೀಕ್ಷೆ ನಡೆಸದೇ ಆಂತರಿಕ ಮೌಲ್ಯ ಮಾಪನ ಹಾಗೂ ಹಿಂದಿನ ಸೆಮಿಸ್ಟರ್ ಪರೀಕ್ಷೆ ಆಧಾರದ ಮೇಲೆ ನಡೆಸುವುದಾಗಿ ಹೇಳಿದೆ. ಹಾಗೂ 6ನೇ ಸೆಮಿಸ್ಟರ್ ಪದವಿ ಹಾಗೂ 4 ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಗಳನ್ನು 13 ದಿನ ಮುಂದೂಡಿರುವುದಾಗಿ ಸುತ್ತೋಲೆ ನೀಡಿದೆ. ಆದರೆ ಆಡ್ ಸೆಮಿಸ್ಟರ್ ಪರೀಕ್ಷೆಗಳನ್ನು ಅಂದರೆ 1, 3, 5 ಸೆಮಿಸ್ಟರ್ ಪರೀಕ್ಷೆಗಳನ್ನು ಕೆಲವು ದಿನ ಮುಂದೂಡಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಗೆ ವಿಶ್ವವಿದ್ಯಾಲಯ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಬಾರಿ ಪ್ರವಾಹ ಬಂದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಹಳ್ಳಿಗಳು ಮುಳುಗಡೆಯಾಗಿವೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗುವುದು ಕಷ್ಟವಾಗಿದೆ. ಆದ ಕಾರಣ ಆಡ್ ಸೆಮಿಸ್ಟರ್ ಪರೀಕ್ಷೆಗಳನ್ನೂ ಸಹ ಮುಂದೂಡಬೇಕೆಂದು ಇಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ರು.