ಮೈಸೂರು: ಇನ್ನು ಮುಂದೆ ನಗರದಲ್ಲಿ ವಿದ್ಯುತ್ ಕಂಬಗಳಲ್ಲಿ ಅಥವಾ ಪ್ರತ್ಯೇಕ ಕಂಬಗಳಲ್ಲಿ ಯಾವುದೇ ರೀತಿಯ ಕೇಬಲ್‌ಗಳನ್ನು (ಓವರ್‌ಹೆಡ್ ಕೇಬಲ್) ಅಳವಡಿಸಲು ಅವಕಾಶವಿಲ್ಲ. ಈ ರೀತಿ ಕೇಬಲ್ ಅಳವಡಿಸಿರುವ ಖಾಸಗಿ ಕಂಪನಿಗಳು, ಖಾಸಗಿ ಕೇಬಲ್ ಮಾಲೀಕರು ಮೂರು ತಿಂಗಳ ಒಳಗೆ ನಗರ ಪಾಲಿಕೆಯಿಂದ ಅನುಮತಿ ಪಡೆದು ಯುಜಿ ಕೇಬಲ್ ಅಳವಡಿಸಿಕೊಳ್ಳುವುದು ಕಡ್ಡಾಯ.
ನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾಲಿಕೆ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಓವರ್‌ಹೆಡ್ ಕೇಬಲ್ ಕುರಿತು ಸುದೀರ್ಘ ಚರ್ಚೆ ನಡೆದು ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.
ಓವರ್‌ಹೆಡ್ ಕೇಬಲ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಮಾತ್ರವಲ್ಲದೆ ಹಲವಾರು ಸಂದರ್ಭಗಳಲ್ಲಿ ಕೇಬಲ್‌ಗಳು ಜೋತು ಬಿದ್ದು ಜನರ ಜೀವಕ್ಕೆ ಸಂಚಕಾರ ಎದುರಾಗಿದೆ. ಅಲ್ಲದೆ ನಗರ ಪಾಲಿಕೆಯ ಅನುಮತಿ ಪಡೆಯದೆ ಚಾಮು ಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಾನೂನು ಬಾಹಿರವಾಗಿ ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಕೆ ಅವಕಾಶ ನೀಡಿದೆ. ಮತ್ತೊಂದೆಡೆ ಕೆಲವು ಖಾಸಗಿ ಕಂಪನಿಗಳು, ಖಾಸಗಿ ಕೇಬಲ್ ಮಾಲೀಕರು ಪ್ರತ್ಯೇಕ ಕಂಬಗಳನ್ನು ಅಳವಡಿಸಿಕೊಂಡು ಕೇಬಲ್ ಎಳೆದಿದ್ದಾರೆ ಎಂದು ಜೆಡಿಎಸ್‌ನ ರಮೇಶ್, ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ಕಾಂಗ್ರೆಸ್‌ನ ಅಯೂಬ್‌ಖಾನ್, ಆರಿಫ್ ಹುಸೇನ್, ಬಿಜೆಪಿಯ ಬಿ.ವಿ. ಮಂಜುನಾಥ್, ರಮೇಶ್, ಸುಬ್ಬಯ್ಯ ಹಾಗೂ ಇತರ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಓವರ್‌ಹೆಡ್ ಕೇಬಲ್ ಅಳವಡಿಕೆ ನಿಷೇಧಿಸಲು ತೀರ್ಮಾನಿಸಲಾಯಿತು. ಖಾಸಗಿ ಕಂಪನಿಗಳು, ಖಾಸಗಿ ಕೇಬಲ್ ಮಾಲೀಕರು ಜ.15 ರೊಳಗೆ ನಗರ ಪಾಲಿಕೆ ಕಚೇರಿಗೆ ಆಗಮಿಸಿ ಯುಜಿ ಕೇಬಲ್ ಅಳವಡಿಕೆಗೆ ಅನುಮತಿ ಪಡೆಯಬೇಕು. ಅದಾದ ಎರಡು ತಿಂಗಳ ಒಳಗೆ ಯುಜಿ ಕೇಬಲ್ ಅಳವಡಿಸಿಕೊಳ್ಳಬೇಕು. ಈ ಅವಧಿಯಲ್ಲಿ ಯುಜಿ ಕೇಬಲ್ ಅಳವಡಿಸಿಕೊಳ್ಳದ ಕಂಪನಿಗಳ ಓವರ್‌ಹೆಡ್ ಕೇಬಲ್‌ಗಳು ಹಾಗೂ ಕಂಬಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಯಿತು.