ಚಿತ್ರದುರ್ಗ: ಚೈತ್ರ ಮಾಸದ ಮೊದಲ ದಿನವಾಗಿ ಆಚರಿಸುವ ಹಿಂದುಗಳ ನೂತನ ಸಂವತ್ಸರದ ಪ್ರಸಿದ್ಧ ಹಬ್ಬವಾದ ಯುಗಾದಿ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಕೋಟೆನಗರಿ ಸೇರಿ ಜಿಲ್ಲಾದ್ಯಂತ ಸಡಗರದ ಆಚರಣೆಗೆ ನಾಗರಿಕರು ಭರದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಯುಗಾದಿ ಅಮಾವಾಸ್ಯೆಯಿಂದ 3 ದಿನ ನಡೆಯಲಿರುವ ಈ ಹಬ್ಬಕ್ಕಾಗಿ ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳ ಬಳಿ ಬಹುತೇಕರು ಮುಗಿಬಿದ್ದ ದೃಶ್ಯ ಸೋಮವಾರ ವಿವಿಧೆಡೆ ಕಂಡು ಬಂದಿತು.
ಮಂಗಳವಾರ ವಿಶೇಷವಾಗಿ ಆಚರಿಸಲಿರುವ ಚಾಂದ್ರಮಾನ ಯುಗಾದಿಗೆ ಕ್ಷಣಗಣನೆ ಆರಂಭವಾಗಿದೆ. ಅದಕ್ಕಾಗಿ ವಾರದಿಂದಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅನೇಕರು ಮುಂದಾಗಿದ್ದು, ಪ್ರಮುಖ ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದವು.
ಈ ಹಬ್ಬದಲ್ಲಿ ಅಭ್ಯಂಜನ ಸ್ನಾನ ಬಹುಮುಖ್ಯವಾಗಿದ್ದು, ಅದಕ್ಕಾಗಿ ಎಣ್ಣೆ, ಉಡುದಾರ, ಮಾವಿನ ಎಲೆ, ಬೇವಿನ ಸೊಪ್ಪು, ಬಿಲ್ವ ಪತ್ರೆ, ವಿವಿಧ ಹಣ್ಣುಗಳು, ಬಾಳೆ ಎಲೆ ಮತ್ತು ದಿಂಡು ಸೇರಿ ಇತರೆ ವಸ್ತುಗಳ ಖರೀದಿ ಭರಾಟೆಯೂ ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿ ನಡೆದವು.
ವಸ್ತ್ರೋದ್ಯಮಕ್ಕೂ ಬೇಡಿಕೆ: ಶುಭ್ರ ಹೊಸ ಬಟ್ಟೆ ಧರಿಸಿ ಹಬ್ಬವನ್ನಾಚರಿಸುವ ಸಲುವಾಗಿ ನಗರ, ಪಟ್ಟಣ, ಗ್ರಾಮೀಣ ಭಾಗದಿಂದ ಅನೇಕರು ವಾಸವಿಮಹಲ್ ರಸ್ತೆ, ಲಕ್ಷ್ಮೀಬಜಾರ್, ಬಿ.ಡಿ.ರಸ್ತೆಯ ಬಟ್ಟೆ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಜನಸಂದಣಿ ಹೆಚ್ಚಾಗಿತ್ತು. ಬೀದಿ ಬದಿಯ ವ್ಯಾಪಾರವೂ ಗಮನ ಸೆಳೆಯಿತು.
ಹಲವು ವಸ್ತುಗಳನ್ನು ಖರೀದಿಸಲು ಹೆಚ್ಚಿನ ಜನಸಂದಣಿ ಉಂಟಾಗಿದ್ದರಿಂದಾಗಿ ಮುಖ್ಯರಸ್ತೆ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿತು. ಕೆಲ ಗಂಟೆಗಳ ಕಾಲ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಇತ್ತು. ಸೋಮವಾರವೂ ವ್ಯಾಪಾರ ಚಟುವಟಿಕೆ ಗರಿಗೆದರಲಿದೆ.
ಯುಗಾದಿ ಅಂಗವಾಗಿ ಮನೆಗಳಲ್ಲಿನ ದೇವರ ವಿಗ್ರಹಗಳಿಗೆ, ಕಳಶಗಳಿಗಾಗಿ 200 ರೂ.ನಿಂದ 1ಸಾವಿರ ರೂ.ವರೆಗಿನ ಹಾರ, ಹಿರಿಯರ ಪೂಜೆಗೂ ಇದೇ ದರದಲ್ಲಿ ಹಾರಗಳನ್ನು ಸಿದ್ಧಪಡಿಸಲಾಗಿತ್ತು. ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ 500 ರೂ.ಗಳಿಂದ 3 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು.
ತೆಂಗಿನಕಾಯಿ 15 ರೂ.ಗಳಿಂದ 35 ರೂ.ವರೆಗೂ ಮಾರಾಟವಾದವು. ಸೇಬು, ಬಿಕ್ಕೆ, ಮೋಸುಂಬಿ, ದ್ರಾಕ್ಷಿ, ಬಾಳೆ ಹಣ್ಣು ಕ್ರಮವಾಗಿ 180-200 ರೂ., 60 ರೂ., 90 ರೂ., 80 ರೂ., 70 ರೂ. ದರ ಇತ್ತು. ಚಂದ್ರದರ್ಶನ ದಿನದಂದು ಹೂ, ಹಣ್ಣು ಒಳಗೊಂಡು ಇತರೆ ಪೂಜಾ ಸಾಮಗ್ರಿಗಳನ್ನು ಕೆಲವರು ಖರೀದಿಸುವ ಸಾಧ್ಯತೆ ಇದೆ.
ಹೂ ಬೆಳೆಗಾರರಲ್ಲಿ ಸಂತಸ: ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ಜೋರಿತ್ತು. ಹಳದಿ, ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿಯ 5ರಿಂದ 6 ಮಾರು ಪುಷ್ಪಕ್ಕೆ ತಲಾ 1ಸಾವಿರ ರೂ.ನಂತೆ ಮಾರಾಟ ಆಗಿದ್ದರಿಂದ ನೂರಾರು ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಅಲ್ಲದೆ, ಕನಕಾಂಬರ ಮತ್ತು ಮಲ್ಲಿಗೆ ಕೂಡ ಎಂದಿಗಿಂತಲೂ ಹೆಚ್ಚಿನ ದರಕ್ಕೆ ಖರೀದಿಯಾದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆಜಿಗೆ 250 ರೂ. ಗಳಿಂದ 350 ರೂ. ಗಳವರೆಗೂ ಮಾರಾಟವಾದವು.