ವಿಜಯಪುರದ ಜಿಲ್ಲಾಧಿಕಾರಿ ಟಿ. ಭೂಬಾಲನ್‌ಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸದಾಶಿವ ಬರಟಗಿ, ಪಾಂಡು ಹ್ಯಾಟಿ ಮತ್ತಿತರರಿದ್ದಾರೆ. 
ಜಿಲ್ಲೆ

ಯುಕೆಪಿಗೆ ಅನುದಾನ ಬಿಡುಗಡೆಗೆ ಆಗ್ರಹ

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಅನುದಾನ ಒದಗಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವ ಪ್ರತಿಭಟನೆ ನಡೆಸಿದ ರೈತರು ಜಿಲ್ಲಾಧಿಕಾರಿ ಟಿ. ಭೂಬಾಲನ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಅರವಿಂದ ಕುಲಕರ್ಣಿ ಮಾತನಾಡಿ, ಲಾಲಬಹಾದ್ದೂರ ಶಾಸ್ತ್ರಿ ಪ್ರಧಾನಿಯಾಗಿದ್ದಾಗ 1964 ಮೇ 22ರಂದು ಆಲಮಟ್ಟಿ ಜಲಾಶಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಬಳಿಕ ಅಣೆಕಟ್ಟು ನಿರ್ಮಾಣಗೊಂಡು 36 ವರ್ಷ ಗತಿಸಿದರೂ ಈವರೆಗೂ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಆಳುವ ವರ್ಗ ಪ್ರತಿಬಾರಿ ಕೃಷ್ಣೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಲೇ ಬಂದಿದ್ದು ಈವರೆಗೂ ಯೋಜನೆ ಪೂರ್ಣಗೊಳಿಸಲಾಗಿಲ್ಲ. ನೀರಿನ ಸದ್ಭಳಿಕೆಯಾಗಿಲ್ಲ ಎಂದರು.

ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಮಾತನಾಡಿ, ನ್ಯಾ. ಬ್ರಿಜೇಶಕುಮಾರ ನೇತೃತ್ವದ ಎರಡನೇ ಕೃಷ್ಣಾ ಅಂತಾರಾಜ್ಯ ವಿವಾದ ನ್ಯಾಯಾಧೀಕರಣವು 2010ರಲ್ಲಿ ತೀರ್ಪು ನೀಡಿತ್ತು. 2013ರಲ್ಲಿ ಅಂತಿಮ ತೀರ್ಪು ಬಂದಿದೆ. 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಸಮಾಧಾನ ಎಂಬಂತೆ ಕಾಲುವೆಗಳ ನಿರ್ಮಾಣ ಮಾಡಲಾಗಿತ್ತು. ಯೋಜನೆ ಆರಂಭವಾಗಿ 60 ವರ್ಷಗಳು ಆಗುತ್ತಾ ಬಂದರೂ ಮೂಲ ಆಶಯ ಈಡೇರಿಲ್ಲವೆಂದರು.

ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ಯೋಜನೆ ಪೂರ್ಣಗೊಳಿಸಲು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ನೇಮಕಗೊಳಿಸಿ ಜಲಾಶಯದ ನೀರಿನ ಮಟ್ಟ ಎತ್ತರಿಸಲು ಸಿವಿಲ್ ಕಾಮಗಾರಿ ಪುನರ್‌ವಸತಿ ಪುನರ್‌ನಿರ್ಮಾಣ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಯೋಜನೆಗಳನ್ನು ಪೂರ್ಣಗೊಳಿಸಲು ತಗಲುವ ಅನುದಾನವನ್ನು ಒದಗಿಸಬೇಕು. ಜಿಲ್ಲೆ ಸಂಪೂರ್ಣ ನೀರಾವರಿಗೆ ಒಳಪಡಬೇಕಾದರೆ ಜಲಾಶಯದ ನೀರಿನ ಮಟ್ಟ 519.60 ರಿಂದ 522.256 ಮೀಟರ್ ಎತ್ತರಕ್ಕೆ ನಿಲ್ಲಿಸಬೇಕು. ಅಂದಾಗ ಮಾತ್ರ ಸಂಪೂರ್ಣ ನೀರಾವರಿ ಸಾಧ್ಯ ಎಂದರು.

ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇದೆ. ಪರಿಹಾರಕ್ಕಾಗಿ ಅಂದಾಜು ಲಕ್ಷ ಕೋಟಿ ಅನುದಾನ ಬೇಕು. ಆದರೆ, ರಾಜ್ಯ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕೇವಲ 19 ಸಾವಿರ ಕೋಟಿ ರೂ.ಮಾತ್ರ ಮೀಸಲಿಟ್ಟಿದೆ. ಇದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕೇವಲ 1,200 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ. ಈ ಅನುದಾನ ಸಾಕಾಗುವುದಿಲ್ಲ. ಹೀಗಾಗಿ ವಿಶೇಷ ಸಚಿವ ಸಂಪುಟ ಕರೆದು ಕನಿಷ್ಠ 10 ಸಾವಿರ ಕೋಟಿ ರೂ.ಅನುದಾನ ನೀಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಬಾಲಪ್ಪಗೊಡ ಲಿಂಗದಳ್ಳಿ, ಸಂಗನಗೌಡ ಬಿರಾದಾರ, ರಾಮಣ್ಣ ಮನ್ಯಾಳ, ಮರಿಗೆಪ್ಪ ಸಾಸನೂರ, ದಾವಲಸಾಬ ನದಾಫ್, ಗಿರಿಮಲ್ಲಪ್ಪ ದೊಡಮನಿ, ಚನಬಸಪ್ಪ ಸಿಂದೂರ, ಸತ್ಯಪ್ಪ ಲಮಾಣಿ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮುಂಡಗನೂರ, ಬಸವರಾಜ ಜಂಗಮಶೆಟ್ಟಿ, ಈರಣ್ಣ ದೇವರಗುಡಿ, ಚೆನ್ನನಗೌಡ ಪಾಟೀಲ, ಶಿವನಗೌಡ ಬಿರಾದಾರ, ಸಂಗಪ್ಪ ನಾಯ್ಕೋಡಿ, ಲಾಲಾಸಾಬ ಹಳ್ಳೂರ, ರಾಜೇಸಾಬ ವಾಲೀಕಾರ, ಮೈಬೂಬ ಅವಟಿ, ಲಂಕೇಶ ಹೆಬ್ಬಾಳ ಮತ್ತಿತರರಿದ್ದರು.