ಬಾಗಲಕೋಟೆ ನಗರದ ಯುಕೆಪಿ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭ.  
ಜಿಲ್ಲೆ

ಯುಕೆಪಿ ಕಚೇರಿಗೆ ಮುತ್ತಿಗೆ...!

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ವಿಭಿನ್ನ ಪ್ರತಿಭಟನೆ ಮೂಲಕ ಸರ್ಕಾರದ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಸ್ಥಳ ಡಿಸಿ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಎಸ್ಪಿ ಕಚೇರಿ ರಸ್ತೆ, ಅಗ್ನಿ ಶಾಮಕ ಧಳ ಕಚೇರಿ ಮೂಲಕ ಯುಕೆಪಿ ಕಚೇರಿ ತಲುಪಿತು. ಬಳಿಕ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಲು ಮುಂದಾದರು. ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ಒಡ್ಡಿದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿ ಕೊನೆಗೆ ಸಮಾಪ್ತಿ ಕೊಂಡಿತು. ಯುಕೆಪಿ ಎದುರು ಗಂಟೆಗಟ್ಟಲೆ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತನ್ಮೂಲಕ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೋರಾಟ ಗುರುವಾರ ಕಾವು ಪಡೆದುಕೊಂಡಿತ್ತು, ಬೀಳಗಿಯಲ್ಲಿ ಹೆದ್ದಾರಿ ತಡೆದ ಸಂತ್ರಸ್ತರು, ಬಾಗಲಕೋಟೆ ಯುಕೆಪಿ ಮಹಾ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹೋರಾಟ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ವಕೀಲರ ಸಂಘದ ರಮೇಶ ಬದ್ನೂರ ಮಾತನಾಡಿ, ನಾವು ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ನಮಗೆ ದ್ರೋಹ ಮಾಡುವ ಉದ್ದೇಶವಿಲ್ಲ. ಕಚೇರಿಗೆ ಒಳಗೆ ಹೋರಾಟಗಾರರನ್ನು ಬಿಡಬೇಕು. ಅದು ಬಿಟ್ಟು ನಮ್ಮ ತಡೆ ಹಿಡಿದರೇ ಹೇಗೆ. ದೇಶಕ್ಕೆ ಅನ್ನ ಹಾಕುವ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಮನವಿ, ಧ್ವನಿ ಆಲಿಸಲು ಯುಕೆಪಿ ಅಧಿಕಾರಗಳು ಆಗಮಿಸಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದಲ್ಲಿ ಹೋರಾಟ ಅನಿವಾರ್ಯ ಎಂದರು.

ಮುಳಗಡೆ ಸಂತ್ರಸ್ತರು ಪರಿಹಾರ ಕೇಳಿ ದಾಖಲಿಸಿದ ಅಂದಾಜು ೧೯ ಸಾವಿರ ಪ್ರಕರಣಗಳು ಶೀಘ್ರ ವಿಲೇವಾರಿಗೆ ೬ ಹೆಚ್ಚುವರಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕರ್ನಾಟಕ ಉಚ್ಛ ನ್ಯಾಯಾಲಯವು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರು ಸರ್ಕಾರದ ಹಣಕಾಸು ಇಲಾಖೆ ಅನುಮೋದನೆ ನೀಡುತ್ತಿಲ್ಲ. ಸಂತ್ರಸ್ತರ ಕುರಿತು, ನ್ಯಾಯಾಂಗ ಇಲಾಖೆ, ನ್ಯಾಯಾಧೀಶರಿಗೆ ಇರುವ ಕಳಕಳಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾ ಸರ್ಕಾರಕ್ಕೆ ಇಲ್ಲ ಎನ್ನುವುದು ದುರಂತ ಸಂಗತಿ. ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ? ಆಳುವ ಎಲ್ಲ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯವಾದಿ ಚಂದ್ರಶೇಖರ ರಾಠೋಡ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಾಳುತ್ತೀವೆ. ಕೇಂದ್ರ ಸರ್ಕಾರ ಮಹತ್ವ ಯೋಜನೆ ಬಗ್ಗೆ ತಿರುಗಿ ನೋಡುತ್ತಿಲ್ಲ ಎನ್ನುವುದು ವಿರ‍್ಯಾಸ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ಬಗ್ಗೆ ನಿಸ್ಸಕಾಳಜಿ ಹೊಂದಿದ್ದಾರೆ. ಈ ವರೆಗೆ ಕೃಷ್ಣೆಯ ಬಗ್ಗೆ ಧ್ವನಿ ಎತ್ತಿಲ್ಲ. ಹೀಗೆ ಆದರೇ ಜನ ಯಾರನ್ನು ನಂಬಬೇಕು. ಯಾವುದೇ ಪಕ್ಷದ ಸರ್ಕಾರವಿರಲಿ ಪ್ರಗತಿ, ಅಭಿವೃದ್ಧಿಯಾಗುವ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಸಿದ್ದು ಸವದಿ, ಸಮಿತಿ ಗೌರವ ಅಧ್ಯಕ್ಷ ಅಜಯ ಕುಮಾರ ಸರನಾಯಕ, ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಮುಖಂಡ ಚಂದ್ರಶೇಖರ ರಾಠೋಡ, ಡಿ.ಬಿ. ಪೂಜಾರ, ನಾಗೇಶ ಗೋಲಶೆಟ್ಟಿ, ಮೋಹನ ಜಾಧವ ಇತರರು ಭಾಗವಹಿಸಿದ್ದರು.