ಜಿಲ್ಲೆ

ಯಾವುದಾದರು ಒಂದು ಚೆನ್ನಾಗಿರುವ ರಸ್ತೆಯನ್ನು ತೋರಿಸಿ: ಸಚಿವರ ಪ್ರಶ್ನೆಗೆ ಅಧಿಕಾರಿ ಕಕ್ಕಾಬಿಕ್ಕಿ

ಮೈಸೂರು: ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿವೆ. ಇಲ್ಲಿ ಯಾವುದಾದರು ಒಂದು ಚೆನ್ನಾಗಿರುವ ರಸ್ತೆಯನ್ನು ತೋರಿಸಿ…?

ಯಾರೋ ವಿರೋಧಪಕ್ಷವರು, ಸಾರ್ವಜನಿಕರು ಕೇಳಿದ ಪ್ರಶ್ನೆಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಖಡಕ್ ಆಗಿ ಕೇಳಿದ ಪ್ರಶ್ನೆ ಇದು. ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹದಗೆಟ್ಟ ರಸ್ತೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿ ಜಿಲ್ಲೆಯಲ್ಲಿ ಕೈಗೊಂಡಿರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ದುರಸ್ತಿಯನ್ನೂ ಮಾಡಿಲ್ಲ ಎಂದು ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಮಹದೇವ, ಅನಿಲ್‌ಚಿಕ್ಕಮಾದು ತೀವ್ರವಾಗಿ ಆಕ್ಷೇಪಿಸಿದರು. ಇದರಿಂದ ಕೆರಳಿದ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ, ಜಿಲ್ಲೆಯ ಎಷ್ಟು ರಸ್ತೆಗಳು ಹಾಳಾಗಿವೆ? ಅವುಗಳ ನಿರ್ವಹಣೆ ಸ್ಥಿತಿಗತಿ ಹೇಗಿದೆ ? ಕೈಗೊಂಡಿರುವ ಕಾಮಗಾರಿ ಎಷ್ಟು ದಿನದೊಳಗೆ ಮುಗಿಯುತ್ತದೆ ಎಂಬುದರ ಕುರಿತು ವಾರದಲ್ಲಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ರಸ್ತೆ ಕಾಮಗಾರಿಯನ್ನು ಸರಿಯಾಗಿ ಮಾಡದ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟು ಏನು ಮಾಡುತ್ತೀರಿ. ಒಬ್ಬರ ಮೇಲಾದರೂ ಕ್ರಮಕೈಗೊಳ್ಳಿ. ಇಲ್ಲವೇ ಕಪ್ಪುಪಟ್ಟಿಗೆ ಸೇರಿಸಿ. ಆಗಲಾದರೂ ಬುದ್ಧಿ ಕಲಿಯುತ್ತಾರೆ ಎಂದು ಜಿಟಿಡಿ ಗುಡುಗಿದರು.

ಶೇ.40 ಕಮಿಷನ್ ಆರೋಪ ಬರುತ್ತಿರಲಿಲ್ಲ:
ಈ ಸಂದರ್ಭದಲ್ಲಿ ಸಚಿವರು, ‘ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಗುತ್ತಿಗೆದಾರರಿಂದ ಬಿಗಿಯಾಗಿ ಕೆಲಸ ಮಾಡಿಸಿದ್ದರೆ ಶೇ.40ರಷ್ಟು ಕಮಿಷನ್ ಆರೋಪ ಏಕೆ ಬರುತ್ತಿತ್ತು? ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಗುತ್ತಿಗೆದಾರರಿಂದ ಸಮರ್ಪಕವಾಗಿ ಕೆಲಸ ಮಾಡಿಸಬೇಕಿತ್ತು. ಆಗ ಅವರಿಂದ ಶೇ.40ರಷ್ಟು ಕಮಿಷನ್ ಆರೋಪ ಕೇಳಿಬರುತ್ತಿಲ್ಲ. ಆದರೆ, ಅಧಿಕಾರಿಗಳೇ ಕ್ರಿಯಾಯೋಜನೆ ಪ್ರಕಾರ ಕೆಲಸ ಮಾಡಿಸಿಲ್ಲ. ಬಿಗಿಯಾಗಿ ಕೆಲಸ ಮಾಡಿಸಿದ್ದರೆ ಈ ರೀತಿ ಆರೋಪಗಳು ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.

ಅರ್ಹರಿಗೆ ಮಾತ್ರ ಪರಿಹಾರ ನೀಡಿ:

ಮಳೆಯಿಂದ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ. ಈ ಹಣದ ಆಸೆಗಾಗಿ ತಾವೇ ಮನೆಯನ್ನು ನೆಲಸಮಗೊಳಿಸಿ ಪರಿಹಾರಕ್ಕೆ ಅರ್ಜಿ ಹಾಕಿರುವ ಮಾಹಿತಿ ಇದೆ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಮಾತು ಕೇಳಿ ಹೀಗೆ ಮಾಡಲಾಗುತ್ತಿದೆ. ಇದರಿಂದಾಗಿ ಅರ್ಹರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹಾನಿಗೊಂಡ ಪ್ರತಿ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಪರಿಹಾರ ನೀಡಬೇಕು ಎಂದು ಸಚಿವರು ಸೂಚಿಸಿದರು.
ಆಗ ಮಧ್ಯಪ್ರವೇಶಿಸಿದ ಶಾಸಕ ಕೆ.ಮಹದೇವು, ನಮ್ಮ ಮೇಲಿನ ಅಸೂಯೆಯಿಂದ ಕೆಲವರು ಹೀಗೆ ಆರೋಪ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಕಾನೂನು ಪ್ರಕಾರ ಪರಿಹಾರ ನೀಡಿ ಎಂದರು. ಇದಕ್ಕೆ ಸ್ಪಷ್ಟನೆಕೊಟ್ಟ ಸಚಿವರು, ನಾನು ಮಹದೇವು ಕುರಿತು ಹೇಳಿಲ್ಲ. ನಿರ್ದಿಷ್ಟವಾಗಿ ಯಾವ ಎಂಎಲ್‌ಎ ಬಗ್ಗೆಯೂ ಹೇಳಿಲ್ಲ. ನನಗೆ ಬಂದ ಮಾಹಿತಿ ಮೇಲೆ ಹೀಗೆ ಹೇಳಿರುವೆ. ಅದು ಸರಿ ಇರಬಹುದು, ತಪ್ಪೂ ಇರಬಹುದು ಎಂದು ತಿರುಗೇಟುಕೊಟ್ಟರು.

ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಸೂಚನೆ:
ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿ ಬಳಿ ಪೂರ್ಣಯ್ಯ ನಾಲೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲಾಗಿದೆ. ನಾಲೆಯಿಂದ 6 ಮೀಟರ್ ಬಫರ್ ಜೋನ್ ಜಾಗವನ್ನೂ ಬಿಡದೆ, ಆಕ್ರಮಿಸಿಕೊಳ್ಳಲಾಗಿದೆ ಎಂದು ಜಿಟಿಡಿ ದೂರಿದರು. ಆಗ ಡಿಸಿ ಅವರು, ಈ ಕುರಿತು ಸರ್ವೇ ಮಾಡಿಸಿ ಒತ್ತುವರಿಯನ್ನು ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಅನ್ಯಾಯ:

ಮಳೆಯಿಂದ ಬೆಳೆ ನಷ್ಟದ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ. ಹಾನಿಗೆ ಒಳಗಾದ ರೈತರ ಹೆಸರು ಕೈಬಿಟ್ಟು ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು, ಕೆ.ಮಹದೇವು ಆಕ್ಷೇಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿಟಿಡಿ, ಪರಿಹಾರ ಪಟ್ಟಿಗೆ ಸೇರಿಸದೆ ರೈತರ ಹೆಸರು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಯಾವುದೇ ರೈತರ ಹೆಸರು ಕೈಬಿಡಬಾರದು. ತೋಟಗಾರಿಕೆ, ಕೃಷಿ ಇಲಾಖೆಯ ಉಪನಿರ್ದೇಶಕರು ಸರಗೂರು, ಎಚ್.ಡಿ.ಕೋಟೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. ಆಗ ಸಚಿವರು ಕೂಡ, ‘ಮಳೆಯಿಂದ ಮನೆ, ಕೃಷಿ ಬೆಳೆ ನಷ್ಟಕ್ಕೆ ಒಳಗಾದವರಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ನಿರ್ದೇಶಿಸಿದರು.

ಅಕ್ರಮ ಸಕ್ರಮ ಯಾವಾಗ?:
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಸಿ ಮತ್ತು 94ಸಿಸಿಯಡಿ ಅನಧಿಕೃತ ಮನೆಗಳ ಸಕ್ರಮಕ್ಕೆ ಅವಕಾಶ ನೀಡಿ 4 ವರ್ಷವಾಗಿದೆ. ಆದ್ಯಾಗಿಯೂ ಕೆಲಸವಾಗಿಲ್ಲ. ಹೀಗಾದರೆ ಹೇಗೆ? ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
2012ರ ಡಿಸೆಂಬರ್‌ಗಿಂತ ಪೂರ್ವದಲ್ಲಿ ನಿರ್ಮಾಣಗೊಂಡ ಮನೆಗಳ ಸಕ್ರಮಕ್ಕೆ ಸರ್ಕಾರವೇ ಅವಕಾಶ ನೀಡಿದೆ. ಈ ವಿಷಯವನ್ನು ಅಧಿಕಾರಿಗಳು ಗಂಭೀರ ಪರಿಗಣಿಸಿ, ಸೂರುದಾರರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಿರ್ದಾಕ್ಷಿಣ್ಯವಾಗಿ ಕೆರೆ ಒತ್ತುವರಿ ತೆರವು ಮಾಡಬೇಕು. ಇದಕ್ಕಾಗಿ ಪೊಲೀಸ್ ರಕ್ಷಣೆ ಪಡೆದುಕೊಳ್ಳಿ ಎಂದು ಡಿಸಿ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಇತರರು ಇದ್ದರು.

ಫಾರೆಸ್ಟ್‌ನವರು ಆಕಾಶದಿಂದ ಬಂದವರು!
ಅರಣ್ಯದಲ್ಲಿ ಹಾಯ್ದುಹೋಗಿರುವ ರಸ್ತೆ ದುರಸ್ತಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಆಕ್ಷೇಪಿಸಿದರು.
ಇದಕ್ಕೆ ಕೆರಳಿದ ಸಚಿವರು, ಅರಣ್ಯ ಇಲಾಖೆಯವರು ಆಕಾಶದಿಂದ ಇಳಿದು ಬಂದವರಂತೆ ಆಡುತ್ತಾರೆ. ಅನುಮತಿ ಕೇಳಿದರೆ ದೆಹಲಿಗೆ ಪತ್ರ ಕಳುಹಿಸಲಾಗಿದೆ ಎನ್ನುತ್ತಾರೆ. ಆದರೆ, ದೆಹಲಿಗೆ ಹೋಗುವುದು ಅಂದರೆ ಸ್ಮಶಾನಕ್ಕೆ ಹೋದಂತೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಚರ್ಚಿಸಿ ತಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಕೆಲ ಹೊತ್ತಿನ ಬಳಿಕ ಸಚಿವರು ‘ಫಾರೆಸ್ಟ್‌ನವರು ಆಕಾಶದಿಂದ ಬಂದವರು’ ಎಂದು ನಾನೂ ಹೇಳಿದರೂ, ನೀವು ಹೀಗೆ ಸುಮ್ಮನೆ ಕುಳಿತಿದ್ದೀರಲ್ಲಾ? ಎಂದು ಡಿಸಿಎಫ್ ಕಮಲಾ ಕರಿಕಾಳನ್ ಅವರನ್ನು ಪ್ರಶ್ನಿಸಿದರು. ಆಗ ಅವರು, ಸಚಿವರು ಈ ಮಾತು ಹೇಳಿದ್ದಕ್ಕೆ ನಾನು ಸುಮ್ಮನಾದೆ, ಇದೇ ಮಾತನ್ನು ಬೇರೆಯವರು ಹೇಳಿದ್ದರೆ ತಕ್ಕ ಉತ್ತರ ಕೊಡುತ್ತಿದ್ದೆ ಎಂದು ನಗುತ್ತಲೇ ಹೇಳಿದರು.

ನೀವೇ ಅದೃಷ್ಟವಂತರು !
ಇಂದಿನ ಸಭೆಯ ಅಜೆಂಡಾ ಪ್ರತಿಯನ್ನು ಶುಕ್ರವಾರ ಸಂಜೆ 6 ಗಂಟೆಗೆ ನೀಡಿದ್ದಾರೆ ಎಂದು ಕೆಡಿಪಿ ಸಭೆಯ ನಾಮನಿರ್ದೇಶಕ ಸದಸ್ಯರೊಬ್ಬರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀವೇ ಅದೃಷ್ಟವಂತರು. ನನಗೆ ಅಜೆಂಡಾ ಪ್ರತಿಯನ್ನು ಇಂದು ಬೆಳಗ್ಗೆ ಕೊಟ್ಟಿದ್ದಾರೆ ಎಂದಾಗ ಸಭೆಯಲ್ಲಿ ನಗೆ ಉಕ್ಕಿತ್ತು.