ಜ್ಞಾನ ಪ್ರಕಾಶ ಸ್ವಾಮೀಜಿ 
ಜಿಲ್ಲೆ

ಯಾವ ಜಾತಿ ಅಂತ ಕೇಳಿ ವರ್ಣಿಸುವುದು ಒಂದೇ...!

ಬಾಗಲಕೋಟೆ: ದೇವರು, ಧರ್ಮಕ್ಕಾಗಿ ಬಹಷ್ಟು ಪ್ರಯತ್ನಿಸಿದ್ದಾರೆ. ಮಣ್ಣು ಗೆದ್ದವರು ಮಣ್ಣಾಗಿದ್ದಾರೆ. ಮನುಷ್ಯತ್ವಕ್ಕಾಗಿ ಗೆದ್ದವರು ಮಹಾತ್ಮರಾಗಿದ್ದಾರೆ. ಅದರಲ್ಲಿ ಅಣ್ಣ ಬಸವಣ್ಣನೇ ಸಾಕ್ಷಿ. ಧರ್ಮ ಹೇಳಿ ಕೊಲ್ಲುವುದು, ಯಾವ ಜಾತಿ ಅಂತ ಕೇಳಿ ವರ್ಣಿಸುವುದು, ಎರಡು ಭಯೋತ್ಪಾದನೆಗೆ ಸಮ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಕೂಡಲಸಂಗಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಕೂಡಲಸಂಗಮ ಅಭಿವೃದ್ಧಿ ಪ್ರಾಽಕಾರ ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಅನುಭವ ಮಂಟಪ-ಬಸವಾದಿ ಶರಣರ ವೈಭವ-೨೦೨೫ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಣ್ಣ ಬಸವಣ್ಣ ಆಚಾರವೇ ಸ್ವರ್ಗ, ಅನಾಚಾರವೇ ನರಕ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಕಾಯ, ಕಾಯಕ ಎರಡು ಶುದ್ಧವಾಗಿರಬೇಕು ಎಂದಿದ್ದಾರೆ. ನಮ್ಮ ದೇಶದಲ್ಲಿ ಎರಡು ಸಂಸ್ಕೃತಿ ಇವೆ. ಒಂದು ಋಷಿ ಇನ್ನೊಂದು ಕೃಷಿ ಸಂಸ್ಕೃತಿ. ಕೃಷಿ ಕಾಯಕ ಆಧಾರಿತ ಸಂಸ್ಕೃತಿ. ಜಾತಿ, ಧರ್ಮ, ವರ್ಣ, ವರ್ಗ ಯಾವುದಕ್ಕೂ ಸಿಮೀತವಿಲ್ಲ. ದುಡಿಮೆ ಬದುಕು. ಅದುವೇ ಶಾಶ್ವತ ಅಂತ ಪ್ರತಿಪಾದಿಸುತ್ತವೆ ಶರಣ ವಚನಗಳು. ಆಕಾರದಲ್ಲಿ ಮನುಷ್ಯರಾದರು, ವಿಚಾರದಲ್ಲಿ ಮಂಗನಾದರೇ ಪ್ರಯೋಜನವಿಲ್ಲ. ಅದಕ್ಕಾಗಿ ಲಿಂಗ ಪ್ರಸ್ತುತ ಪಡಿಸಿದ್ದಾರೆ. ಲಿಂಗ ಎನ್ನುವುದು ಪರಸ್ಪರ ಗೌರವಿಸುವ ವಿದಾನ. ಎಲ್ಲರನ್ನು ಶರಣ ಅಂತ ಸಂಬೋಽಸಲಾಗುತ್ತದೆ ಎಂದರು.

ಬೈಲಹೊಂಗಲದ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಜಾತಿವಾದಿ, ಸಂಪ್ರದಾಯವಾದಿ, ಪಟ್ಟಭದ್ರ ಹಿತಾಸಕ್ತಿಗಳು ಮರೆ ಮಾಚುವ ಈ ಕಾಲದಲ್ಲಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿರುವುದು ಸಂತೋಷ ತಂದಿದೆ. ಬಸವ ಜಯಂತಿ ಅಂದರೇ ಮಾನವ ಹಕ್ಕುಗಳ ದಿನಾಚರಣೆ. ಇದು ಧಾರ್ಮಿಕ, ರಾಜಕೀಯ ಉತ್ಸವ ಅಲ್ಲ. ಮಾನವನ ಅಸ್ಮೀತೆಯ ಪ್ರತೀಕ. ಗರ್ಭಗುಡಿ ಸಂಸ್ಕೃತಿಯಲ್ಲಿ ಇದ್ದ ಮಾನವ ಸಂಸ್ಕೃತಿಗೆ ಮತ್ತೆ ಬಸವಣ್ಣ ಅವರನ್ನು ಸರ್ಕಾರ ಕರೆ ತಂದಿದೆ ಎಂದು ಹೇಳಿದರು.

ಒಂದು ಸಾವಿರ ವರ್ಷಗಳ ಹಿಂದೆ ದೇವರು, ಧರ್ಮದ ಬಗ್ಗೆ ಮಾತನಾಡುವವರು ಇದ್ದರು. ಮನುಷ್ಯರ ಬಗ್ಗೆ ಮಾತನಾಡಿದ ಏಕದೇವ ಬಸವಣ್ಣ. ಸಾವಿರಾರು ವೇಶ್ಯರನ್ನು ಶರಣೆರನ್ನಾಗಿಸಿ ಮಹಾನ್ ಪ್ರವರ್ತಕರಾಗಿದ್ದಾರೆ. ಧಾರ್ಮಿಕ ನೆಲಗಟ್ಟು ಮೀರಿ ಮಾನವ ತತ್ವ ಕಟ್ಟಿದ್ದಾರೆ. ನೊಂದವರಿಗೆ, ಕೇಳವರ್ಗದವರಿಗೆ ಬಸವಣ್ಣ ಯಾರು ಅಂತ ಗೊತ್ತಿದೆ. ಬಸವಣ್ಣವರ ಕ್ರಾಂತಿ ಮೆಚ್ಚಿ ಆಂಧ್ರಪ್ರದೇಶ, ಮಹಾರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಾರು ಶರಣರು ಬಂದರು. ಅರ‍್ಯಾರು ವಚನಗಳನ್ನು ತಮ್ಮ ಭಾಷೆಯಲ್ಲಿ ರಚನೆ ಮಾಡಲಿಲ್ಲ. ಕನ್ನಡದಲ್ಲಿ ಬರೆದರು. ಇದಕ್ಕೆ ಕಾರಣ ಬಸವಣ್ಣ. ಎಲ್ಲ ವಚನಗಳನ್ನು ಕನ್ನಡದಲ್ಲೇ ಬರೆಯುವಂತೆ ತಿಳಿಸುತ್ತಿದ್ದರು. ಕನ್ನಡದ ಮೇಲಿನ ಅವರ ಪ್ರೀತಿ ನಿಜಕ್ಕೂ ಶ್ಲಾಘನೀಯ. ಕನ್ನಡ ಉಳಿಸಿದವರೇ ಬಸವಣ್ಣ ಅಂತ ಬಣ್ಣಿಸಿದರು.

ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರನ್ನು ಅರ್ಥೈಸಿಕೊಂಡು ನಾವೆಲ್ಲ ಬದುಕಬೇಕಿದೆ. ಅನ್ನಕ್ಕೆ ಕೊರತೆಯಾಗಬಾರದು ಅಂತ ಹೇಳಿದ್ದಾರೆ. ಮಾನ, ಪ್ರಾಣಕ್ಕೆ ಕುತ್ತು ಬಂದರೇ ಪ್ರಶ್ನಿಸಬೇಕು. ಹೋರಾಡಬೇಕು ಅಂತ ಹೇಳಿದ್ದಾರೆ. ದೇವರು, ಧರ್ಮ ಹೆಸರಿನಲ್ಲಿ ಅನಾಚಾರ ಒಪ್ಪಲಿಲ್ಲ. ಅವರು ನಿಜವಾಗಿಯು ಸಾಂಸ್ಕೃತಿಕ ನಾಯಕ. ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಅದನ್ನು ಹೊಸ ಕಾಲಘಟ್ಟದಲ್ಲಿ ದೃಢಪಡಿಸಿದೆ ಎಂದರು.