ಜಿಲ್ಲೆ

ಯಾರೂ ಕೂಡ ಜಾತಿಗೆ ಅಂಟಿಕೊಳ್ಳಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಜಾತಿ ಇನ್ನೂ ವಿನಾಶವಾಗದಿರುವುದಕ್ಕೆ ತಳ ಸಮುದಾಯದವರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರದಿರುವುದೇ ಮುಖ್ಯ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ಧಾರ್ಥನಗರದ ಕನಕಗುರುಪೀಠ ಶಾಖಾಮಠದ ಕನಕ ಭವನದಲ್ಲಿ  ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿದರು.

ಯಾರೂ ಜಾತಿ ಮಾಡಲು ಹೋಗಬಾರದು. ಇನ್ನೊಂದು ಜಾತಿ, ಧರ್ಮದವರನ್ನು ದ್ವೇಷಿಸಬಾರದು. ಜಾತಿ ಹೆಸರು ಹೇಳಬಾರದು ಎಂದು ಹೇಳುತ್ತಿಲ್ಲ. ಅದಕ್ಕೆ ಅಂಟುಕೊಂಡಿರಬಾರದು. ಎಲ್ಲರೊಂದಿಗೆ ಸಮಾನರಾಗಿ ಬದುಕಬೇಕು. ಮನುಷ್ಯರಾಗಿ ಹುಟ್ಟಿದ ಮೇಲೆ ಪರಸ್ಪರ, ಪ್ರೀತಿ ವಿಶ್ವಾಸದಿಂದ ಜೀವಿಸಬೇಕು ಎಂದು ಹೇಳಿದರು.

ಶತಮಾನಗಳ ಹಿಂದೆಯೇ ಕನಕದಾಸರು, ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಹೀಗಾಗಿ, ಜಾತಿ ಮಾಡಬಾರದು. ಹಾಗೆಯೇ ನಡೆದು ಬಂದ ದಾರಿಯನ್ನೂ ಮರೆಯಬಾರದು. ಶೋಷಿತರು, ತುಳಿತಕೊಳ್ಳಗಾದವರ ಪರ ಕೆಲಸ ಮಾಡಬೇಕು ಎಂದು ಹೇಳಿದರು.

ಕೆಲ ಪಟ್ಟಭದ್ರ ಹಿತಾಸಕ್ತರಿಂದ ಜಾತಿ ಪದ್ಧತಿ ಇನ್ನೂ ಉಸಿರಾಡುತ್ತಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮಾನತೆ ಬಂದರೆ ಜಾತಿ ನಾಶವಾಗುತ್ತದೆ. ಹುಟ್ಟುವಾಗ ವಿಶ್ವಮಾನವರು ಬೆಳೆಯುತ್ತಾ ಅಲ್ಪಮಾನವರೆಂದು ವಿಶ್ವಕವಿ ಕುವೆಂಪು ಹೇಳಿದ್ದಾರೆ. ವಿಶ್ವಮಾನವರಾಗುವತ್ತ ಪ್ರತಿಯೊಬ್ಬರು ಪ್ರಯತ್ನ ಮಾಡಬೇಕು ಎಂದರು.

ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಶಿಕ್ಷಣ ಪಡೆದವರಿಗೆ ನೀತಿ, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದು ಯಾರೊಬ್ಬರ ಸ್ವತ್ತಲ್ಲ. ಅದನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸವಾಗಬೇಕು. ಆಗ ಮಾತ್ರ ತಳಸಮುದಾಯದವರೂ ಸಮಾಜದ ಮುಂಚೂಣಿಗೆ ಬರಲು ಸಾಧ್ಯ ಎಂದರು.

ಹುಟ್ಟು ಆಕಸ್ಮಿಕ, ಸಾಯೋದು ನಿಶ್ಚಿತ. ಜನನ-ಮರಣಗಳ ನಡುವಿನ ಬದುಕು ಸಾರ್ಥಕವಾಗಿ ಮಾಡಿಕೊಳ್ಳಬೇಕು. ನನ್ನ 78 ವರ್ಷ ಜೀವನವನ್ನು ಹಿಂದಕ್ಕೆ ತಿರುಗಿ ನೋಡಿದರೆ ಸಂತೃಪ್ತಿಯಾಗುತ್ತದೆ ಎಂದು ಹೇಳಿದರು.

ಪ್ರತಿಭಾನ್ವಿತರು ತಮ್ಮ ಶಿಕ್ಷಣವನ್ನು ಮುಂದುವರಿಸಿ ಉನ್ನತ ಸ್ಥಾನ ಗಳಿಸಬೇಕು. ಬಳಿಕ ಸಮಾಜ ಹಾಗೂ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಗಳಿಸುವುದು ಸುಲಭದ ಕೆಲಸವಲ್ಲ. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಈ ಸಾಧನೆ ಸಾಧ್ಯ.

ನಿತ್ಯ ಐದಾರು ಗಂಟೆ ಓದುವುದರಿಂದ ಹೆಚ್ಚು ಅಂಕ ಪಡೆಯಬಹುದು. ನಾನೂ ಎಸ್ಸೆಸ್ಸೆಲ್ಸಿವರೆಗೂ ಓದಿನಲ್ಲಿ ಮುಂದಿದ್ದೆ. ಪಿಯುಸಿ, ಬಿಎಸ್ಸಿಗೆ ಬಂದ ಮೇಲೆ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗುತ್ತಿದ್ದೆ. ಕನ್ನಡದಿಂದ ಇಂಗ್ಲಿಷ್‌ಗೆ ಮಾಧ್ಯಮ ಬದಲಾಯಿತು. ಆದರೆ, ನಾನೆಂದೂ ಫೇಲ್ ಆಗಲಿಲ್ಲ ಎಂದು ಸ್ಮರಿಸಿಕೊಂಡರು.

ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿಯ ಸಂಚಾಲಕ ಎಂ.ಶಿವಣ್ಣ ಮಾತನಾಡಿ, ನಗರದ ಪ್ರಮುಖ ಉದ್ಯಾನದಲ್ಲಿ ಕನಕದಾಸರ ಕಂಚಿನ ಪ್ರತಿಮೆ ನಿರ್ಮಿಸಬೇಕು. ಮೈಸೂರು ಗ್ರಾಮಾಂತರ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಬೇಕು ಎಂದು ಬೇಡಿಕೆಯನ್ನು ಸಲ್ಲಿಸಿದರು. ಬೇಡಿಕೆ ಪರಿಗಣಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಕಳೆದ ಎರಡು ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕಾಗಿನೆಲೆ ಕನಕ ಗುರುಪೀಠ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಪಾಲಿಕೆ ಮಾಜಿ ಸದಸ್ಯರಾದ ಜೆ.ಗೋಪಿ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮತ್ತಿತರರು ಹಾಜರಿದ್ದರು.