ಗಂಗಾಧರ್ ಬೈರಾಪಟ್ಟಣ ರಾಮನಗರ
ನಿಗಮ-ಮಂಡಳಿಗಳಿಗೆ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದು, ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 5 ಪ್ರಾಧಿಕಾರಗಳಿದ್ದು. ಇವುಗಳಲ್ಲಿ ಈಗಾಗಲೇ ಮಾಗಡಿ ಯೋಜನಾ ಪ್ರಾಧಿಕಾರಕ್ಕೆ ಬದಲಾವಣೆ ಮಾಡಲಾಗಿದೆ. ಉಳಿದಂತೆ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಬದಲಾವಣೆ ನಡೆಯುವ ಸಾಧ್ಯತೆ ಕಡಿಮೆ ಇದ್ದು, ಉಳಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಕನಕಪುರ ಯೋಜನಾ ಪ್ರಾಧಿಕಾರ ಹಾಗೂ ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರ ಬದಲಾವಣೆಗೆ ಸಿದ್ಧತೆಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಲ್ಲರೂ ರುದ್ರೇಶ್ ಬೆಂಬಲಿಗರು
ಜಿಲ್ಲೆಯ ಎಲ್ಲ ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವವರೆಲ್ಲರೂ ಕೆಆರ್‌ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಬೆಂಬಲಿಗರು. ಕನಕಪುರದಲ್ಲಿ ಜಗನ್ನಾಥ್, ರಾಮನಗರಕ್ಕೆ ಮುರಳೀಧರ್ ಹಾಗೂ ಬಿಡದಿ ಸ್ಮಾರ್ಟ್ ಸಿಟಿಗೆ ವರದರಾಜಗೌಡ ಅಧ್ಯಕ್ಷರಾಗಿದ್ದಾರೆ. ಇದರ ಹೊರತಾಗಿ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ ಅವರಿಗೆ ಮಾಜಿ ಸಚಿವ ಯೋಗೇಶ್ವರ್ ಬಲವಿದೆ. ಈಗಾಗಲೇ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಂಗಧಾಮಯ್ಯ ಅವರ ಸ್ಥಾನಕ್ಕೆ ರಾಜೇಶ್ ಅವರನ್ನು ನೇಮಕ ಮಾಡಲಾಗಿತ್ತು.
ಬಿಜೆಪಿಯಲ್ಲಿ ಮೂರು ಬಾಗಿಲು: ಜಿಲ್ಲೆಯ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಮೂರು ಬಣಗಳಿಗೆ ಎಂ.ರುದ್ರೇಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಹಾಗೂ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಬೆಂಬಲಿಸುವ ಮತ್ತೊಂದು ಬಣವಿದೆ. ಈಗ ಆಪರೇಷನ್ ಪ್ರಾಧಿಕಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮೂರು ಬಣಗಳೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಇದಕ್ಕಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಮನೆಗಳಿಗೆ ಓಡಾಟ ನಡೆಸಿ ಕೆಲವರು ಸುಸ್ತೂ ಆಗಿದ್ದಾರೆ.
ಉಳಿಸಿಕೊಳ್ಳಲು ಯತ್ನ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂ.ರುದ್ರೇಶ್ ಈ ಹಿಂದೆ ಬೆಂಬಲಿಗರಿಗೆ ಆಯಕಟ್ಟಿನ ಜಾಗ ಕೊಡಿಸಿದ್ದರು. ಈಗ ಪ್ರಾಧಿಕಾರಗಳ ಅಧ್ಯಕ್ಷರ ಬದಲಾವಣೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಉಳಿದಿರುವ ಅಧ್ಯಕ್ಷ ಸ್ಥಾನಗಳು ಬೆಂಬಲಿಗರಿಂದ ಕೈತಪ್ಪಬಾರದು ಎನ್ನುವ ಕಾರಣಕ್ಕೆ ಯಡಿಯೂರಪ್ಪ ಮೂಲಕವೇ ಸಿಎಂ ಮೇಲೆ ಒತ್ತಡ ಹೇರಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಾರಿ ಯಡಿಯೂರಪ್ಪ ಸಹ ಹೊಸಬರ ನೇಮಕಕ್ಕೆ ಓಕೆ ಎಂದಿರುವ ಕಾರಣ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಹೋರಾಟಕ್ಕೆ ಇಳಿದವರಿಗೆ ನಿರಾಶೆ ಮೂಡಿಸಿದೆ.
ಮತ್ತೊಂದೆಡೆ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್ ಸಹ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮೂಲಕ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನಗಳನ್ನು ಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಒಟ್ಟಾರೆ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನದ ಬದಲಾವಣೆ ಪ್ರಕ್ರಿಯೆ ರಾಮನಗರ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಕಾದು ನೋಡಬೇಕಿದೆ.
ಪಕ್ಷ ನಿಷ್ಠರಿಗಷ್ಟೇ ಮಣೆ ಈ ಬಾರಿ ಪಕ್ಷದ ಜಿಲ್ಲಾ ಉಸ್ತುವಾರಿಗಳು ಮತ್ತು ರಾಜ್ಯ ನಾಯಕರು ಸೂಚಿಸುವ ಮಂದಿಗಷ್ಟೇ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಲ್ಲಿ ಅವಕಾಶ ದೊರೆಯಲಿದೆ ಎಂದು ತಿಳಿದು ಬಂದಿದೆ. ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ವ್ಯಕ್ತಿ ನಿಷ್ಠವಾಗಿ ನಡೆದುಕೊಳ್ಳುವವರನ್ನು ಅಧಿಕಾರದಿಂದ ದೂರವೇ ಉಳಿಸುವ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಕಳೆದ ಹಲವಾರು ವರ್ಷಗಳಿಂದಲೂ ಪಕ್ಷ ನಿಷ್ಠರಾಗಿ ದುಡಿದು ಅಧಿಕಾರ ಇಲ್ಲದೇ ಇರುವವರಿಗೆ ಈ ಬಾರಿ ಅಧಿಕಾರ ದೊರೆಯುವುದು ನಿಶ್ಚಿತ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ.