ಕಾರವಾರ: ಕರೊನಾದಲ್ಲಿ ವಲ್ನರೇಬಲ್ ಗ್ರುಪ್ ಎಂದು ಗುರುತಿಸಿರುವ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಗಂಭೀರ ಕಾಯಿಲೆ ಇರುವವರಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು. ಯಾರನ್ನು ತಾರತಮ್ಯದಿಂದ ಕಾಣಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಸೋಮವಾರ ನಡೆಸಿ ಅವರು ಮಾತನಾಡಿದರು. ಜನ ಕರೊನಾ ಅಪಾಯಕಾರಿ ಎಂಬ ಕಲ್ಪನೆಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಆದರೆ, ಆರೋಗ್ಯ ಸಮಸ್ಯೆ ಉಂಟಾದರೆ ಮುಚ್ಚಿಟ್ಟುಕೊಳ್ಳಬಾರದು ಎಂದು ವಿನಂತಿಸಿದ ಸಚಿವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇನ್ನು 10 ದಿನಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬೂತ್ ಮಟ್ಟದ ಸಮಿತಿ ರಚಿಸಲು ಸೂಚಿಸಿದರು.
ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಪ್ರಮುಖರು ಇರುವ ಸಮಿತಿಯನ್ನು ರಚಿಸಬೇಕು. ಜಿಲ್ಲೆಯಲ್ಲಿ 2500 ಕ್ಕೂ ಅಧಿಕ ಬೆಡ್ಗಳು ಕರೊನಾಕ್ಕಾಗಿ ಮೀಸಲಿವೆ. ಅದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚುಸುವ ಪ್ರಯತ್ನದಲ್ಲಿದ್ದೇವೆ. ಎಲ್ಲ ಶಾಸಕರು, ಸಂಸದರು, ಎಂಎಲ್ಸಿ ನಿಧಿಯಲ್ಲಿ ಎರಡು ಆಂಬುಲೆನ್ಸ್ಗಳನ್ನು ಖರೀದಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಭಟ್ಕಳದಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದರೆ ಅರ್ಧ ದಿನದ ಲಾಕ್ಡೌನ್ನ್ನೂ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಉಸುಕು ನೀತಿ ಸರಳ: ಹೊಸ ಮರಳು ನೀತಿ ಪ್ರಕಟವಾಗಿದ್ದು, ಅದರಲ್ಲಿ ಮರಳು ಸಾಗಣೆಯ ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಅದರ ಸದುಪಯೋಗ ಜಿಲ್ಲೆಗೆ ಆಗುವಂತೆ ನೋಡಿಕೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಎಸ್ಪಿ ಶಿವಪ್ರಕಾಶ ದೇವರಾಜು ಇದ್ದರು.
ಔಷಧ ಗದ್ದಲ: ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೆದ ಔಷಧ ನೀಡಿದ್ದಾರೆ ಎಂಬ ಆರೋಪ ಕೆಡಿಪಿ ಸಭೆಯಲ್ಲೂ ಸದ್ದು ಮಾಡಿತು. ಶಾಸಕಿ ರೂಪಾಲಿ ನಾಯ್ಕ ವಿಷಯ ಪ್ರಸ್ತಾಪಿಸಿ, ರೆವರೆಂಡ್ ಎಂಬ ಆಯುರ್ವೆದ ಔಷಧದದಿಂ ಕರೊನಾ ಗುಣವಾಗುತ್ತದೆ. ಜಿಲ್ಲಾ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರಿಗೆ ಆ ಔಷಧ ನೀಡಿ ಗುಣ ಮಾಡಲಾಗಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಪ್ರಚಾರ ನಡೆಸಿದ್ದಾರೆ. ಇದು ಜನರಲ್ಲಿ ಗೊಂದಲ ಹುಟ್ಟಿಸುವುದಾಗಿದೆ. ಖಾಸಗಿ ಕಂಪನಿಗೆ ಲಾಭ ಮಾಡಿಕೊಡುವ ಇರಾದೆ ಮಾಜಿ ಶಾಸಕರಿಗೆ ಇದೆ. ಈ ಕುರಿತು ಕ್ರಿಮ್್ಸ ವೈದ್ಯರು ಸ್ಪಷ್ಟನೆ ನೀಡಬೇಕು ಎಂದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಕ್ರಿಮ್್ಸ ಆಸ್ಪತ್ರೆಯಲ್ಲಿ ಎಂಸಿಆರ್ಐ ನಿಯಮಾವಳಿಯಂತೆ ಅಲೋಪತಿ ಔಷಧಗಳನ್ನು ಮಾತ್ರ ನೀಡಲಾಗುತ್ತಿದೆ. ಮಾಜಿ ಶಾಸಕರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಕೋವಿಡ್-19 ಗೆ ಇದುವರೆಗೂ ಯಾವುದೇ ಅಧಿಕೃತ ಔಷಧ ಸಂಶೋಧನೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರ ಕೆಲವೆಡೆ ಕರೊನಾಗೆ ಪರಿಹಾರ ಎಂದು ಕೆಲವರು ಬಿಂಬಿಸುತ್ತಿದ್ದು, ಆರೋಗ್ಯ ಇಲಾಖೆ ಅದನ್ನು ಗಮನಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.