ಜಿಲ್ಲೆ

ಯಾದಗಿರಿಯಲ್ಲಿ ಗುಡುಗು ಸಹಿತ ಮಳೆ

ಯಾದಗಿರಿ: ನಗರ ಸೇರಿ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಜಿಲ್ಲೆಯ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಕೆಲ ಹೊತ್ತು ಸಂಚಾಕರ ತಂದೊಡ್ಡಿದೆ.

ಸುಮಾರು ಒಂದು ಗಂಟೆಗು ಅಧಿಕ ಗುಡುಗು, ಸಿಡಿಲು ಸಹಿತ ಬಂದ ಮಳೆಗೆ ಜನರು ಜಿಲ್ಲೆಯ ಜನರು ತತ್ತರಿಸುವಂತಾಯಿತು. ತಾಲೂಕಿನ ಜಿನಕೇರ ತಾಂಡಾದಲ್ಲಿ ಸಿಡಿಲು ಬಡಿದು ಒಂದೆ ಕುಟುಂಬ ನಾಲ್ವರು ಮೃತಪಟ್ಟರೆ, ಎಸ್.ಹೊಸಳ್ಳಿಯಲ್ಲಿ ಸಿಡಿಲಿ ೧೦ ಕುರಿಗಳು ಮೃತಪಟ್ಟ ಘಟನೆ ನಡೆದಿದೆ.
ನಗರದಲ್ಲಿ ಇಳಿಜಾರು ಪ್ರದೇಶದ ಮನೆಗಳಿಗೆ ಹಾಗೂ ಗಾಂಧಿ ಚೌಕ್‌ಬಳಿ ಹೊಸದಾಗಿ ನಿರ್ಮಿಸಿರುವ ನಗರ ಪೊಲೀಸ್ ಠಾಣೆ ಆವರಣಕ್ಕೆ ಮಳೆ ನೀರು ನುಗ್ಗಿ ದೊಡ್ಡ ಆವಾಂತರವೆ ಸೃಷ್ಟಿಯಾಗಿದೆ. ಇನ್ನೂ ಉದ್ಘಾಟನೆಗೊಳ್ಳದ ಠಾಣೆಯಾಗಿದ್ದು, ಇಲ್ಲಿ ಇಳಿಜಾರು ಇರುವುದರಿಂದ ಸುರಿದ ಮಳೆ ನೀರು ಠಾಣೆ ಆವರಣಕ್ಕೆ ನುಗ್ಗಿದೆ. ಅನೇಕ ಕಡೆ ರಸ್ತೆಯಲ್ಲಿನ ಸಣ್ಣ ಪುಟ್ಟ ಅಂಗಡಿಗಳಿಗೂ ನೀರು ನುಗ್ಗಿವೆ.

ನಗರದ ಬಹುತೇಕ ರಸ್ತೆಗಳಲ್ಲಿ ೨-೩ ಫಿಟ್ ಮಳೆ ನೀರು ಹರಿದು ಹಳ್ಳದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಮೈಲಾಪುರ ಅಗಸಿ, ಮಾತಾ ಮಾಣಿಕೇಶ್ವರ ನಗರ, ಕನಕ ನಗರ, ಹೊಸಳ್ಳಿ ಕ್ರಾಸ್, ಗಾಂಧಿ ಸರ್ಕಲ್ ಹೀಗೆ ಮಳೆ ನೀರು ಧಾರಕಾರವಾಗಿ ಹರಿಯುತ್ತಿರುವ ಕಾರಣ ವಾಹನ ಸಂಚಾರಕ್ಕೆ ತೀವ್ರ ಪರದಾಡುವಂತಾಯಿತು.

ಸುಮಾರು ಹೊತ್ತು ಸುರಿದ ಮಳೆಗೆ ಅಲ್ಲಲ್ಲಿ ಗಿಡ, ಮರಗಳು ನೆಲ ಕಚ್ಚಿವೆ. ವಿದ್ಯುತ್ ತಂತಿ ಕಡಿದು ಬಿದ್ದಿವೆ. ಮಳೆ ನೀರಿನೊಂದಿಗೆ ಚರಂಡಿ ನೀರು ಸೇರಿ ರಸ್ತೆ ಮೇಲೆ ಹರಿದ ಕಾರಣ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚಾರ ಮಾಡುವಂತಾಯಿತು. ಬೆಳಗ್ಗೆ ಮನೆಯಿಂದ ಹೊಲ, ಗದ್ದೆಗಳಿಗೆ ಹೋಗಿದ್ದ ಜಾನುವಾರು ಸಹ ಈ ಭಾರಿಗೆ ಹೈರಾಣಾಗಿವೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.