ಜಿಲ್ಲೆ

ಯಾಂತ್ರೀಕೃತ ಪದ್ಧತಿಯಿಂದ ಸಮಸ್ಯೆ ನಿವಾರಣೆ

ಹಾನಗಲ್ಲ: ಕೃಷಿಯಲ್ಲಿ ಬಿತ್ತನೆಯಿಂದ-ಕೊಯ್ಲಿನವರೆಗೆ ಯಾಂತ್ರೀಕರಣದ ಮೂಲಕ ಸ್ವಾವಲಂಬನೆ ಮೂಡಿಸುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶವಾಗಿದೆ. ಯಾಂತ್ರೀಕೃತ ಪದ್ಧತಿಯಿಂದ ಕಾರ್ವಿುಕರ ಸಮಸ್ಯೆ ಹಾಗೂ ವೆಚ್ಚವನ್ನು ತಗ್ಗಿಸುವುದು ಸಾಧ್ಯವಾಗಲಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಹೇಳಿದರು.

ತಾಲೂಕಿನ ಗೊಂದಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 50 ಲಕ್ಷಕ್ಕಿಂತ ಹೆಚ್ಚು ರೈತ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರೈತರು ವಾಣಿಜ್ಯ ಬೆಳೆಗಳಿಗೆ ಮಣೆ ಹಾಕಿ ಭತ್ತ ನಿರ್ಲಕ್ಷಿಸಬಾರದು. ರೈತರ ಸಹಾಯಕ್ಕೆ ಜಿಲ್ಲೆಗೊಂದು ಯಂತ್ರಶ್ರೀ ಕಚೇರಿ ಸ್ಥಾಪಿಸುವ ಚಿಂತನೆ ನಡೆದಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾಧಿಕಾರಿ ಮಹಾಬಲ ಕುಲಾಲ ಮಾತನಾಡಿ, ಕಳೆದ ವರ್ಷ ಶ್ರೀ ಪದ್ಧತಿಯಲ್ಲಿ ಭತ್ತ ನಾಟಿ ಕೈಗೊಳ್ಳಲಾಗಿತ್ತು. ಪ್ರಸಕ್ತ ವರ್ಷ ಯಂತ್ರದ ಮೂಲಕ ನಾಟಿ, ಕಟಾವು ಪದ್ಧತಿಯ ಜಾಗೃತಿ ಮೂಡಿಸಲಾಗುತ್ತಿದೆ. ಕೃಷಿಯಲ್ಲಿ ಬಂಡವಾಳ ಕಡಿಮೆಯಾಗಿ, ಆದಾಯ ಹೆಚ್ಚಿಸುವ ಯೋಜನೆ ನಮ್ಮದಾಗಿದೆ. ಯುವ ಸಮುದಾಯ ಇತ್ತೀಚೆಗೆ ಕೃಷಿಯಿಂದ ವಿಮುಖವಾಗುತ್ತಿದೆ. ಅವರಿಗೆ ಸಮಗ್ರ ಕೃಷಿಯಲ್ಲಿ ಆದಾಯವಿದೆ ಎಂಬುದನ್ನು ತಿಳಿಯಪಡಿಸಬೇಕಿದೆ ಎಂದರು.

ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಯಾಂತ್ರೀಕೃತ ನಾಟಿ ತಾಲೂಕಿನಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿದೆ. ರೈತರ ಮನಃ ಪರಿವರ್ತನೆ ಮಾಡುವ ಮೂಲಕ ಸಾಂಪ್ರದಾಯಿಕ ಬೇಸಾಯದಿಂದ ಯಾಂತ್ರೀಕರಣಕ್ಕೆ ಪರಿವರ್ತಿಸಲಾಗಿದೆ ಎಂದರು.

ತಾಪಂ ಸದಸ್ಯೆ ವಿದ್ಯಾ ಪಾಟೀಲ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರತ್ನ ಹೆಗಡೆ, ಮಾರ್ಕಂಡೆಪ್ಪ ಪೂಜಾರ, ರಮೇಶ ಪೂಜಾರ ಪಾಲ್ಗೊಂಡಿದ್ದರು.

152 ಎಕರೆ ಪ್ರದೇಶ ಆಯ್ಕೆ

ತಾಲೂಕಿನಲ್ಲಿ 152 ಎಕರೆ ಪ್ರದೇಶವನ್ನು ಯಾಂತ್ರೀಕೃತ ನಾಟಿಗೆ ಆಯ್ಕೆ ಮಾಡಲಾಗಿದೆ. ಆ. 8ರವರೆಗೂ ನಾಟಿ ಕೈಗೊಳ್ಳಲಾಗುವುದು. ಕಾರ್ವಿುಕರಿಂದ ಮಾಡುವ ನಾಟಿಗಿಂತ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಇದರಿಂದ ಶೇ. 20ರಷ್ಟು ಉತ್ಪಾದನೆ ಹೆಚ್ಚಲಿದೆ. ಕೇವಲ 850 ರೂ.ಗಳಲ್ಲಿ ಎಕರೆ ನಾಟಿ ಮಾಡಬಹುದಾಗಿದೆ. ಧರ್ವ-ವರದಾ ನದಿಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹಾಗೂ ಕೊಳವೆಬಾವಿ ಹೊಂದಿದ ರೈತರು ಈ ನಾಟಿ ಪದ್ಧತಿ ಅಳವಡಿಸಿಕೊಳ್ಳಬಹುದು. ಜನಸಂಖ್ಯೆ ಆಧಾರದಲ್ಲಿ ಭತ್ತ ಉತ್ಪಾದನೆ ಕುಂಠಿತವಾಗಿದೆ. ಭತ್ತಕ್ಕೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಭತ್ತಕ್ಕೆ ಹೆಚ್ಚು ಬೆಲೆ ಬರಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಭಿವೃದ್ಧಿ ಅಧಿಕಾರಿ ಪ್ರದೀಪ ಹೆಗಡೆ ಹೇಳಿದರು.