ಮೂಡಲಗಿ: ವಿದ್ಯಾರ್ಥಿಗಳಲ್ಲಿ ಸತತ ಪ್ರಯತ್ನ, ಇಚ್ಛಾಶಕ್ತಿ ಹಾಗೂ ದಢವಾದ ಆತ್ಮವಿಶ್ವಾಸವಿದ್ದರೆ ಯಶಸ್ಸು ತಮ್ಮ ಬೆನ್ನಹಿಂದೆ ಬರುತ್ತದೆ ಎಂದು ಗೋಕಾಕದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಗಂಗಾಧರ ವಿ.ಮಳಗಿ ಹೇಳಿದರು.
ಇಲ್ಲಿನ ಸಾಯಿ ಶಿಕ್ಷಣ ಸಂಸ್ಥೆಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಪದವಿ ಪೂರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಚಟುವಟಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ನಾಡಿನ ಸಂಸ್ಕೃತಿ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅತಿಥಿ ಡಾ. ತಿಮ್ಮಣ್ಣ ಗಿರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ದಢ ಸಂಕಲ್ಪ ಹೊಂದಬೇಕು. ಕಲಿಕೆಯ ಅವಧಿಯನ್ನು ವ್ಯರ್ಥ ಮಾಡಿಕೊಳ್ಳದೆ ಅಧ್ಯಯನ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಪುಲಕೇಶಿ ಸೋನವಾಲಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಎಲ್ಲ ಸೌಲಭ್ಯ ಕಲ್ಪಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರೊ. ಎಸ್.ಎಂ. ಕಮದಾಳ, ಶಿಕ್ಷಕ ಎನ್.ಜಿ. ಯರಗಟ್ಟಿ, ದಯಾನಂದ ಮಟ್ಟಿಕಲ್ಲಿ, ಪ್ರಾಚಾರ್ಯ ಪ್ರವೀಣ ಕುಲಗೋಡ, ಉಪ್ರ ಪ್ರಾಚಾರ್ಯ ಪ್ರಭು ಮೇಟಿ, ಎಸ್.ಬಿ. ಬಡಿಗೇರ ಇತರರು ಇದ್ದರು.