ಜಿಲ್ಲೆ

ಯಶಸ್ವಿಯಾಗಿ ನಡೆದ ವಿಜಯವಾಣಿ- ದಿಗ್ವಿಜಯ ಪದಬಂಧ ಕಾರ್ಯಕ್ರಮ

ಹಾಸನ: ಕನ್ನಡ ಎಲ್ಲಾ ಭಾಷೆಗಳಿಗಿಂತ ಶ್ರೀಮಂತ ಮತ್ತು ಸುಂದರ ಭಾಷೆಯಾಗಿದೆ. ಪ್ರತಿಯೊಬ್ಬರ ಬೆಳವಣಿಗೆಗೆ ಮೂಲ ಭಾಷೆಯಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ಸಹಯೋಗದಲ್ಲಿ ಸ್ವಾತಂತ್ರೊೃೀತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕನ್ನಡ ಪದಬಂಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವಂತಹ ಪ್ರತಿಭೆಯನ್ನು ಹೊರ ಹಾಕುವ ದೃಷ್ಟಿಯಿಂದ ಅವರಲ್ಲಿ ಆತ್ಮಬಲ, ಆತ್ಮಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು.

ವಿಜಯವಾಣಿ ಮತ್ತು ದಿಗ್ವಿಜಯ ಸಹಯೋಗದಲ್ಲಿ ನಡೆಯುತ್ತಿರುವ ಪದಬಂಧ ಕಾರ್ಯಕ್ರಮ ಅತ್ಯಂತ ಖುಷಿಯ ವಿಚಾರ. ಏಕೆಂದರೆ ಮಕ್ಕಳಲ್ಲಿ ಪದಗಳ ಅರ್ಥ, ಅದನ್ನು ಕಲಿಯುವುದರ ಜತೆಗೆ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ಸ್ಪರ್ಧೆಯಿಂದ ಆಸಕ್ತಿ, ಸಂತೋಷ, ತೃಪ್ತಿ ವೃದ್ಧಿಸಲಿದೆ. ನಮ್ಮಲ್ಲಿ ಇರುವಂತಹ ಕ್ರಿಯಾಶೀಲತೆಯನ್ನು ಹಾಗೂ ಪ್ರಜ್ಞೆಯನ್ನು ಹೆಚ್ಚಿಸಲು ಈ ಪದಬಂಧ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಭಾಷೆಯ ಮೇಲೆ ಹಿಡಿತ ಹಾಗೂ ಹೆಚ್ಚು ಅಧ್ಯಯನದಿಂದ ಇಂತಹ ಸ್ಪರ್ಧೆಗಳಲ್ಲಿ ಜಯಶೀಲರಾಗಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಭಾಷೆಯ ಮೇಲೆ ಹಿಡಿತ ಸಾಧಿಸದೆ ಕೇವಲ ಯಾಂತ್ರಿಕ ಯುಗಕ್ಕೆ ಜೋತು ಬೀಳುತ್ತಿದ್ದಾರೆ. ಕನ್ನಡ ಭಾಷೆ ಬಗ್ಗೆ ಪೋಷಕರು ಹಾಗೂ ಇಂದಿನ ಮಕ್ಕಳು ಅಸಡ್ಡೆ ತೋರುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ವ್ಯಾಮೋಹದ ಕಡೆಗೆ ದೂಡುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿಕ್ಷಕರು ಕೂಡ ಕನ್ನಡ ಭಾಷೆ ನಿರ್ಲಕ್ಷಿಸುತ್ತಿರುವುದರಿಂದ ಸಾವಿರಾರು ವರ್ಷದ ಇತಿಹಾಸ ಹೊಂದಿರುವ ನಮ್ಮ ಭಾಷೆಗೆ ಸಾಕಷ್ಟು ಅಡೆ ತಡೆಗಳು ಉಂಟು ಮಾಡುತ್ತಿದೆ ಎಂದು ಹೇಳಿದರು.

ಕನ್ನಡ ಓದುವುದೇ ಮಹಾ ಅಪರಾಧ ಎಂಬಂತೆ ಇಂದಿನ ಮಕ್ಕಳು ಭಾವಿಸಿದ್ದಾರೆ. ಭಾಷೆಯ ಮೇಲೆ ಕನಿಷ್ಠ ಕಾಳಜಿ ಕೂಡ ಅವರಲ್ಲಿ ಇಲ್ಲವಾಗಿದೆ. ಇದಕ್ಕೆಲ್ಲಾ ಕಾರಣ, ಇಂಗ್ಲಿಷ್ ವ್ಯಾಮೋಹ ಹಾಗೂ ಪೋಷಕರು ಒತ್ತಾಯ. ನಮ್ಮೆಲ್ಲರ ಮಾತೃಭಾಷೆ ಕನ್ನಡವೇ ಆಗಿದ್ದರೂ ನಾವು ಒಂದೆರಡು ನಿಮಿಷ ನಿರರ್ಗಳವಾಗಿ ಕನ್ನಡ ಮಾತನಾಡಲು ತಡವರಿಸುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಬದಲಾಗಬೇಕು. ಆಗ ಭಾಷೆ ಬೆಳೆವಣಿಗೆಯಾಗಲಿದೆ ಎಂದರು.

ಎಂಎಂಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉಮೇಶ್ ಮಾತನಾಡಿ, ಇಂಗ್ಲಿಷ್ ಭಾಷೆಯ ಬಗ್ಗೆ ಸಾಕಷ್ಟು ವ್ಯಾಮೋಹಗಳು ಹೆಚ್ಚಾಗುತ್ತಿದ್ದು, ಇದರಿಂದ ಕನ್ನಡದ ಬಗ್ಗೆ ಕೀಳರಿಮೆ ಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾನು ಕೂಡ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಯಲ್ಲಿ ಕಲಿತು ಇಂದು ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ನಾನು ಇಂದು ಅತ್ಯಂತ ಗೌರವಿಸುವ ಹಾಗೂ ಪ್ರೀತಿಸುವ ಭಾಷೆ ನನ್ನ ಮಾತೃಭಾಷೆ ಕನ್ನಡ ಎಂದರು.

ನಮ್ಮ ಮಾತೃಭಾಷೆಯನ್ನು ನಾವು ಗೌರವಿಸಬೇಕು. ಯಾರು ಎಷ್ಟೇ ಎತ್ತರದ ಸ್ಥಾನದಲ್ಲಿ ಇರಲಿ, ಎಷ್ಟೇ ಭಾಷೆ ಕಲಿತಿರಲಿ ಅವರಲ್ಲೆರೂ ಮೊದಲು ಆಲೋಚಿಸುವುದು, ಯೋಚಿಸುವುದು, ಕನಸು ಕಾಣುವುದು ಮಾತೃಭಾಷೆಯಲ್ಲೇ. ಹೀಗಾಗಿ ನಮ್ಮ ಭಾಷೆ ಮೇಲೆ ನಮಗೆ ಹೆಮ್ಮೆ ಇರಬೇಕು ಎಂದು ಹೇಳಿದರು.

ಪದಬಂಧ ಕಾರ್ಯಕ್ರಮದ ಮೂಲಕ ಪದಗಳನ್ನು ಜೋಡಿಸುವುದರ ಜತೆಗೆ ಮನಸ್ಸುಗಳನ್ನು ಜೋಡಿಸುವಂತಹ ಕಾರ್ಯಕ್ರಮಗಳಾಗಬೇಕು. ಮಕ್ಕಳಿಗೆ ಇಂತಹ ಕಾರ್ಯಕ್ರಮವನ್ನು ವಿಜಯವಾಣಿ ದಿನಪತ್ರಿಕೆ ಆಯೋಜನೆ ಮಾಡುವ ಮೂಲಕ ಅವರ ಮನಸ್ಸು ಮತ್ತು ಜ್ಞಾನ ವಿಕಸನಕ್ಕೆ ಆದ್ಯತೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಎಲ್ಲ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ

ವಿಜಯವಾಣಿ ಮತ್ತು ದಿಗ್ವಿಜಯ ವತಿಯಿಂದ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ವಿವಿಧ ಕಾಲೇಜುಗಳಿಂದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರಿಯಾಗಿ ಉತ್ತರ ನೀಡಿದ ಐದು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಯಿತು. ಐದು ವಿದ್ಯಾರ್ಥಿಗಳಿಗೆ ತಲಾ ಒಂದೊಂದು ಪುಸ್ತಕ ಹಾಗೂ ಪ್ರಶಂಸಾ ಪತ್ರ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

ನಗದು ಬಹುಮಾನ ಪಡೆದವರು

ಕಾಂತೇಶ್, ಸ್ನಾತಕೋತ್ತರ ವಿದ್ಯಾರ್ಥಿ, ಹೇಮಾ ಗಂಗೋತ್ರಿ ಹಾಸನ

ಯೋಗೀಶ್, ಸ್ನಾತಕೋತ್ತರ ವಿದ್ಯಾರ್ಥಿ, ಹೇಮಾ ಗಂಗೋತ್ರಿ ಹಾಸನ

ಭಾರತಿ, ಎವಿಕೆ ಪಿಯು ಕಾಲೇಜು ಹಾಸನ

ಕವನಾ, ಎವಿಕೆ ಪಿಯು ಕಾಲೇಜು ಹಾಸನ

ಶ್ರೇಯಸ್, ಎವಿಕೆ ಪಿಯು ಕಾಲೇಜು ಹಾಸನ

ಸಮಾಧಾನಕರ ಬಹುಮಾನ

ಕೃಪಾ, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ಹಾಸನ

ಎಸ್. ತನುಶ್ರೀ, ಸ್ನಾತಕೋತ್ತರ ವಿದ್ಯಾರ್ಥಿನಿ, ಹೇಮಾ ಗಂಗೋತ್ರಿ ಹಾಸನ

ಸ್ವಾತಿ, ಎವಿಕೆ ಪಿಯು ಕಾಲೇಜು ಹಾಸನ

ಅನ್ನಪೂರ್ಣಾ, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ಹಾಸನ

ರೋಹಿಣಿ, ಎವಿಕೆ ಪಿಯು ಕಾಲೇಜು ಹಾಸನ

ಕವನ ಬರೆದ ವಿಜೇತ ವಿದ್ಯಾರ್ಥಿ

ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಕಾಂತೇಶ್ ಮಾತನಾಡಿ, ಪದಬಂಧ ಸ್ಪರ್ಧೆ ಆಯೋಜನೆ ಮಾಡಿದ ವಿಜಯವಾಣಿಗೆ ಧನ್ಯವಾದ ಹೇಳಿದರು. ಹಾಗೆ ಸ್ಥಳದಲ್ಲಿಯೇ ಕವನ ರಚಿಸಿ ವಾಚಿಸಿದರು.

ಸ್ವಾತಂತ್ರೋತ್ಸವ ನಮ್ಮ ಸಂಭ್ರಮ

ಇಲ್ಲಿ ಎಲ್ಲರೂ ಸರಿ ಎಲ್ಲವೂ ಸಮ

ಪದಬಂಧದಲ್ಲಿತ್ತು ಒಂದು ವರ್ಣ ಅದು ಸಕ್ಷಮ

ಎಲ್ಲರಿಗೂ ಈಗಲಾದರೂ ಅರಿವಾಗಿರಬೇಕು ಕನ್ನಡದ ಸೂಕ್ಷ್ಮ..

ಎಲ್ಲರ ನಾಲಗೆ ಮೇಲೆ ಕನ್ನಡ ವಾಣಿ

ಪ್ರೀತಿಯ ಧನ್ಯವಾದಗಳು ವಿಜಯವಾಣಿ

------