ಹಾಸನ: ರಾಜ್ಯಾದ್ಯಂತ ಸೋಮವಾರದಿಂದ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಮೊದಲ ದಿನವೇ 114 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಪರೀಕ್ಷೆಗೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ಈಗಾಗಲೇ 19,494 ವಿದ್ಯಾರ್ಥಿಗಳು ನೋಂದಾವಣಿ ಮಾಡಿಕೊಂಡಿದ್ದರು. ಅದರಲ್ಲಿ 19,380 ವಿದ್ಯಾರ್ಥಿಗಳು ಮೊದಲ ದಿನ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆದಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 73 ಕೇಂದ್ರಗಳನ್ನ ತೆರೆಯಲಾಗಿತ್ತು. 537 ಶಾಲೆಗಳಿಂದ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು, ಮೊದಲನೇ ದಿನ ಪರೀಕ್ಷೆಗೆ ಯಾವುದೇ ರೀತಿ ವಿಘ್ನವಿಲ್ಲದಂತೆ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸುವಲ್ಲಿ ಇಲಾಖೆ ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಂಟ್ರೋಲ್ ರೂಂ:
ಸೋಮವಾರ ಅನುಭವದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ವೆಬ್ ಕೋಸ್ಟಿಂಗ್ ಕಂಟ್ರೋಲ್ ರೂಮ್ ಆರಂಭಿಸಿದ್ದು ಜಿಲ್ಲೆಯ ನಡೆಯುತ್ತಿರುವ ಪರೀಕ್ಷೆಯನ್ನು ಜಿಲ್ಲಾ ಪಂಚಾಯಿತಿಯಲ್ಲಿ ಕುಳಿತು ವೀಕ್ಷಿಸಬಹುದಾಗಿದೆ.
ಜಿಲ್ಲೆಯಲ್ಲಿ ಒಟ್ಟು 914 ಕೊಠಡಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಆ ಎಲ್ಲಾ ಕೊಠಿಡಿಗಳಿಗೆ ಸಿ.ಸಿ. ಕ್ಯಾಮೆರಾ ಮತ್ತು ಇಂಟರ್ನೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಸಮಸ್ಯೆ ಉಂಟಾದರೆ ಅದನ್ನು ಪರಿಹರಿಸಲು ಈಗಾಗಲೇ ತಂಡವನ್ನು ರಚನೆ ಮಾಡಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕಂಟ್ರೋಲ್ ರೂಮ್‌ನ್ನ ಆರಂಭಿಸಿದ್ದು, ಇಲ್ಲಿ ಕುಳಿತುಕೊಂಡು ಜಿಲ್ಲೆಯ ಎಲ್ಲಾ ಕೊಠಡಿಗಳಲ್ಲಿ ನಡೆಯುತ್ತಿರುವಂತಹ ಪರೀಕ್ಷೆಯನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಆರಂಭಿಸಲಾಗಿದೆ.
ಈ ಕಂಟ್ರೋಲ್ ರೂಮಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.