ಚಿಕ್ಕಮಳಲಿ ಗ್ರಾಮದ ಜಮೀನಿನಲ್ಲಿನ ಬಾಳೆ ಬೆಳೆ. 
ಜಿಲ್ಲೆ

ಯಶಸ್ವಿ ಕೃಷಿ ಸಾಧಕ ಮಹದೇವ್

ಪಿರಿಯಾಪಟ್ಟಣ: ಕೇವಲ ತಂಬಾಕು ಬೆಳೆಗೆ ಸೀಮಿತವಾಗಿದ್ದ ಬರಡು ಭೂಮಿಯನ್ನು ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಂಡು ವಾಣಿಜ್ಯ ಬೆಳೆಗಳ ಕಣಜವನ್ನಾಗಿ ಪರಿವರ್ತಿಸುವಲ್ಲಿ ತಾಲೂಕಿನ ಚಿಕ್ಕಮಳಲಿ ಗ್ರಾಮದ ಪ್ರಗತಿಪರ ರೈತ ಮಹದೇವ್ ಯಶಸ್ವಿಯಾಗಿದ್ದಾರೆ.

ಚಿಕ್ಕಮಳಲಿ ಗ್ರಾಮದ ಕೃಷಿಕರಾದ ಸಿ.ಕೆ. ಶಿವಣ್ಣೇಗೌಡ ಮತ್ತು ಜಯಮ್ಮ ದಂಪತಿ ಮೂವರು ಮಕ್ಕಳಲ್ಲಿ ಏಕೈಕ ಪುತ್ರರಾಗಿರುವ ಸಿ.ಎಸ್. ಮಹದೇವ್ ಬೆಟ್ಟದಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯುಸಿವರೆಗೆ ವ್ಯಾಸಂಗ ಮುಗಿಸಿದ್ದು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂಬ ಬಯಕೆ ಇದ್ದರೂ ತಂದೆಯೊಂದಿಗೆ ಕೃಷಿ ಚಟುವಟಿಕೆಗೆ ನೆರವಾಗಬೇಕು ಎಂಬ ಉದ್ದೇಶದಿಂದ ಓದು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡರು.

ಸುಣ್ಣದಕಲ್ಲು ಮಿಶ್ರಿತ ನುಜ್ಜಲು ಮಣ್ಣಿನ ಸುಮಾರು 13 ಎಕರೆ ಜಮೀನು ತಂಬಾಕಿಗೆ ಮಾತ್ರ ಸೀಮಿತವಾಗಿತ್ತು. ಪ್ರತಿ ವರ್ಷ ಆಂಧ್ರದಿಂದ 20ಕ್ಕೂ ಹೆಚ್ಚು ಕೂಲಿಯಾಳುಗಳನ್ನು ಕರೆಸಿ 2ರಿಂದ ಮೂರು ತಿಂಗಳು ಅವರಿಗೆ ಆಶ್ರಯ ಕೊಟ್ಟು 15 ರಿಂದ 20 ಸಾವಿರ ಕೆಜಿ ವರೆಗೆ ತಂಬಾಕು ಬೆಳೆಯಲಾಗುತ್ತಿತ್ತು. ತಂಬಾಕು ಬೆಳೆಯಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಿದ್ದರೂ ಮನೆ ಮಂದಿಯೆಲ್ಲ ನಿರಂತರವಾಗಿ ದುಡಿಯಬೇಕಾದ ಅನಿವಾರ್ಯತೆ ಇತ್ತು. ಕೂಲಿಯಾಳುಗಳ ಸಮಸ್ಯೆ, ಮಾನಸಿಕ ಒತ್ತಡದಿಂದಾಗಿ ತಂಬಾಕು ಬೆಳೆಯನ್ನು ಕಡಿಮೆ ಮಾಡಿಕೊಂಡು ವಾಣಿಜ್ಯ ಬೆಳೆಗಳತ್ತ ಚಿತ್ತಹರಿಸಬೇಕೆಂದು ಮಹದೇವ್ ದೃಢ ನಿರ್ಧಾರ ಮಾಡಿದರು.

ಕೆ.ಆರ್. ನಗರ ತಾಲೂಕಿನ ಚೆನ್ನಂಗೆರೆ ಗ್ರಾಮದ ಶಂಕರೇಗೌಡ-ಶಿವಮ್ಮ ದಂಪತಿ ಪುತ್ರಿ ಪ್ರತಿಮಾರನ್ನು ವಿವಾಹವಾದ ಮಹದೇವ್ ವಾಸ್ತವ್ಯವನ್ನು ಜಮೀನಿನಲ್ಲಿದ್ದ ಮನೆಗೆ ಸ್ಥಳಾಂತರಿಸಿದರು. ನುಜ್ಜಲು ಮಣ್ಣಿನ ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಬೇಕೆಂಬ ಇರಾದೆಯೊಂದಿಗೆ ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಲೋಡಿನಷ್ಟು ಕೆರೆಯ ಗೋಡು ಮಣ್ಣನ್ನು 13 ಎಕರೆ ಜಮೀನಿಗೆ ಸುರಿಸಿದರು. ಸಮೀಪದಲ್ಲಿ ಇರುವ ಬೆಟ್ಟದಪುರ ಬೆಟ್ಟದ ಭಾಗದಿಂದ ಕಾಡು ಹಂದಿಗಳು ಜಮೀನುಗಳಿಗೆ ಲಗ್ಗೆಯಿಟ್ಟು ಹಾನಿ ಮಾಡುವುದನ್ನು ತಡೆಯಲು ಜಮೀನಿನ ಸುತ್ತಲೂ ಸೋಲಾರ್ ತಂತಿ ಬೇಲಿ ಅಳವಡಿಸಿದರು. 2013 ರಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದ ಬಳಿಕ ಹಸಿಮೆಣಸಿನಕಾಯಿ, ಟೊಮ್ಯಾಟೊ, ಕೋಸು ಮತ್ತಿತರ ತರಕಾರಿಗಳನ್ನು ಸತತವಾಗಿ 3 ವರ್ಷ ಬೆಳೆದರು. ತರಕಾರಿಯಿಂದ ಹೆಚ್ಚಿನ ಆದಾಯವಿಲ್ಲದಿದ್ದರೂ ನಷ್ಟವಂತೂ ಇರಲಿಲ್ಲ.

ತರಕಾರಿಯೊಂದಿಗೆ ಅಂತರ ಬೇಸಾಯ ಪದ್ಧತಿಯಡಿ ಬಾಳೆ ಮತ್ತು ಅಡಕೆಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಆರಂಭಿಸಿದರು. ಜಮೀನಿನಲ್ಲಿ ಸುಂದರ ಮನೆ ನಿರ್ಮಾಣ: ಏಳು ಎಕರೆ ಪ್ರದೇಶದಲ್ಲಿ ಸುಮಾರು 350 ತೆಂಗಿನ ಮರಗಳನ್ನು, 5 ಎಕರೆ ಪ್ರದೇಶದಲ್ಲಿ ಸುಮಾರು 3 ಸಾವಿರ ಅಡಕೆ ಮರಗಳನ್ನು ಹಾಗೂ 5 ಎಕರೆ ಪ್ರದೇಶದಲ್ಲಿ ಜಿ9 ತಳಿಯ 4500 ಬಾಳೆ ಗಿಡಗಳನ್ನು ಬೆಳೆದಿರುವ ಮಹಾದೇವ್ ಅವರಿಗೆ ಪ್ರತಿ ವರ್ಷ ಸರಾಸರಿ 25 ಸಾವಿರ ತೆಂಗಿನಕಾಯಿಯಿಂದ 4 ಲಕ್ಷ ರೂ., 200 ಕ್ವಿಂಡಾಲ್ ಅಡಕೆಯಿಂದ 9 ರಿಂದ 10 ಲಕ್ಷ ರೂ. ಮುತ್ತು 150 ಟನ್ ಬಾಳೆಯಿಂದ ಸುಮಾರು 20 ಲಕ್ಷ ರೂ. ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಬರುವ ಆದಾಯವನ್ನು ದುಂಡುವೆಚ್ಚ ಮಾಡದೆ ಇತಿಮಿತವಾಗಿ ಬಳಸಿ, ಸುಖ ಜೀವನ ನಡೆಸುತ್ತಿರುವ ಮಹದೇವ್ ತಮ್ಮ ಜಮೀನಿನಲ್ಲಿ ವಾಸಕ್ಕೆ ಚೆಂದದ ಮನೆಯನ್ನು ನಿರ್ಮಿಸುತ್ತಿದ್ದಾರೆ.

ಜೇನುಕೃಷಿ: ತೋಟಗಾರಿಕಾ ಇಲಾಖೆ ನೆರವಿನೊಂದಿಗೆ ಜೇನು ಕೃಷಿಯನ್ನು ತೋಟದಲ್ಲಿ ಅಳವಡಿಸಲಾಗಿದ್ದು ಜೇನು ಹುಳುಗಳ ಪರಾಗಸ್ಪರ್ಶದಿಂದಾಗಿ ಪ್ರತಿಯೊಂದು ಬೆಳೆಯಲು ಶೇ.10 ರಿಂದ 15 ರಷ್ಟು ಇಳುವರಿ ಹೆಚ್ಚಳವಾಗುತ್ತದೆ ಎಂಬುದು ಮಹದೇವ್ ಅಭಿಪ್ರಾಯವಾಗಿದೆ. ಸಂಗ್ರಹವಾಗುತ್ತಿರುವ ಜೇನನ್ನು ಸದ್ಯಕ್ಕೆ ಮನೆಗೆ ಉಪಯೋಗಿಸುತ್ತಿದ್ದು ಹೆಚ್ಚು ಉತ್ಪಾದನೆಯಾದಲ್ಲಿ ಮಾರಾಟ ಮಾಡುವ ಚಿಂತನೆಯೂ ಇದೆ. ಇದರೊಂದಿಗೆ ಹಲಸು, ಕಿತ್ತಲೆ, ಚಕ್ಕೋತ, ಮಾವು, ಸೀಬೆ, ನೆಲ್ಲಿ, ಬಟರ್‌ಫ್ರೂಟ್, ಸಪೋಟ, ಪಪ್ಪಾಯ ಸೇರಿದಂತೆ 20ಕ್ಕೂ ಹೆಚ್ಚಿನ ರೀತಿಯ ಹಣ್ಣಿನ ಗಿಡಗಳನ್ನು ತೋಟದಲ್ಲಿ ಬೆಳೆಸಿದ್ದಾರೆ.

ಪಾಲಿ ಹೌಸ್ ನಿರ್ಮಾಣ: ತಮಗೆ ಅಗತ್ಯವಿರುವ ಅಡಕೆ ಸಸಿಗಳು ಮತ್ತು ತೆಂಗಿನ ಸಸಿಗಳನ್ನು ನಮ್ಮ ಜಮೀನಿನಲ್ಲಿಯೇ ಸಿದ್ಧಪಡಿಸಿಕೊಳ್ಳುವ ಮಹದೇವ್ ಇತರರಿಗೂ ಸಸಿಗಳನ್ನು ಮಾರಾಟ ಮಾಡುತ್ತಾರೆ. ಜಮೀನಿನಲ್ಲಿಯೇ ಪಾಲಿ ಹೌಸ್ ನಿರ್ಮಿಸಿರುವ ಇವರು ಟೊಮ್ಯಾಟೊ, ಎಲೆಕೋಸು, ಕಲ್ಲಂಗಡಿ, ಬದನೆ, ಹೂಕೋಸು ಇತರ ತರಕಾರಿ ಗಿಡಗಳನ್ನು ಪಾಲಿಹೌಸ್ ಒಳಗಿನ ಉತ್ತಮ ತಾಂತ್ರಿಕತೆಯ ಸಸಿಮಡಿಯಲ್ಲಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆವರೆಗಿನ ರೈತರು ಇಲ್ಲಿಗೆ ಬಂದು ಸಸಿಗಳನ್ನು ಕೊಳ್ಳುವುದು ವಿಶೇಷವಾಗಿದೆ.

ಸದಾ ತೇವಾಂಶ ಕಾಯ್ದುಕೊಳ್ಳುವಿಕೆ: ಜಮೀನಿನಲ್ಲಿ ಇರುವ ನಾಲ್ಕು ಬೋರ್‌ವೆಲ್‌ಗಳಿಂದ ಹನಿ ನೀರಾವರಿ ಪದ್ಧತಿಯ ಮೂಲಕ ಎಲ್ಲ ಗಿಡಗಳಿಗೂ ಸಮರ್ಪಕವಾಗಿ ನೀರು ಹಾಯಿಸಲಾಗುತ್ತಿದೆ. ಬೇಸಿಗೆಯಲ್ಲಿಯೂ ಜಮೀನಿನಲ್ಲಿ ತೇವಾಂಶ ಆರದಂತೆ ಎಚ್ಚರ ವಹಿಸಲಾಗಿದೆ. ಕಳೆ ಮತ್ತು ಅಡಕೆಗರಿ ಮತ್ತಿತರ ತ್ಯಾಜ್ಯಗಳನ್ನು ಕಳೆ ಕಟಾವು ಯಂತ್ರದ ಮೂಲಕ ಜಮೀನಿನಲ್ಲಿ ಪುಡಿ ಮಾಡಿ ಗೊಬ್ಬರವನ್ನಾಗಿ ಮಾಡಲಾಗುತ್ತಿದೆ. ಬೋರ್ವೆಲ್‌ಗಳಲ್ಲಿ ಅಂತರ್ಜಲ ಕೊರತೆಯಾಗದಂತೆ ಇಂಗುಗುಂಡಿಯನ್ನು ನಿರ್ಮಿಸಿ ಮಳೆಯ ನೀರು ವ್ಯರ್ಥವಾಗದಂತೆ ಇಂಗುಗುಂಡಿಗೆ ಭರ್ತಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಹೈನುಗಾರಿಕೆ, ಕೋಳಿ ಸಾಕಣೆ: ಜಮೀನಿನ ಅಡಕೆ ತೋಟದ ಮಧ್ಯ ಭಾಗದಲ್ಲಿ ಕೋಳಿ ಗೂಡು ನಿರ್ಮಿಸಿ 50ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕುವ ಮೂಲಕ ಕುಕ್ಕುಟೋದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ತೇವಾಂಶ ಮತ್ತು ಹುಲುಸಾದ ಬೆಳೆ ಇರುವುದರಿಂದ ಕೋಳಿಗಳಿಗೆ ಮೇವಿನ ಕೊರತೆ ಎದುರಾಗದು. ಹಸುಗಳ ಸಾಕಣೆಗಾಗಿ ವಿಶೇಷ ಕೊಟ್ಟಿಗೆ ನಿರ್ಮಿಸಲಾಗಿದೆ.

ಉತ್ತಮ ಕೃಷಿಕ ಪ್ರಶಸ್ತಿ: ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಿರುವ ಮಹದೇವ್ ಉತ್ತಮ ತಾಂತ್ರಿಕತೆಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಾವಯವ ಗೊಬ್ಬರದ ಜತೆಗೆ ರಸಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿ ಉತ್ತಮ ಇಳುವರಿ ಪಡೆಯಬಹುದು ಎಂಬುದು ಅವರ ಅನಿಸಿಕೆಯಾಗಿದೆ. ರೈತ ದಸರಾ ಕಾರ್ಯಕ್ರಮದಲ್ಲಿ ನೀಡಲಾಗುವ ಉತ್ತಮ ರೈತ ಪ್ರಶಸ್ತಿಗೆ ಭಾಜನರಾಗಿರುವ ಮಹದೇವ್ ಕೃಷಿ ಇಲಾಖೆಯಿಂದ ಆತ್ಮ ನಿರ್ಭರ ಯೋಜನೆಯಡಿ ನೀಡಲಾಗುವ ಅತ್ಯುತ್ತಮ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ರೈತರು ಒಂದೇ ಬೆಳೆಗೆ ಸೀಮಿತಗೊಳ್ಳದೆ ಮಿಶ್ರ ಬೇಸಾಯ ಪದ್ಧತಿ ಅನುಸರಿಸುವುದರಿಂದ ಹೆಚ್ಚಿನ ಲಾಭ ಕಾಣಬಹುದಾಗಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಗೊಳ್ಳಬೇಕು. ಉತ್ತಮ ತಾಂತ್ರಿಕ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ಸಾವಯವ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ನೀಡಬೇಕು.
> ಮಹದೇವ್ , ಪ್ರಗತಿಪರ ರೈತ