ಅರಸೀಕೆರೆ ಗ್ರಾಮಾಂತರ: ತಾಲೂಕಿನ ಯಳವಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೇಮಲಿಂಗೇಗೌಡ (ಯತೀಶ್) ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಎಂ.ಎಸ್. ಇಂದ್ರಮ್ಮ ಶಾಂತಪ್ಪ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೇಮಲಿಂಗೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಸ್. ಇಂದ್ರಮ್ಮ ಶಾಂತಪ್ಪ ಗೀಜಿಹಳ್ಳಿ ಅವರನ್ನು ಹೊರತುಪಡಿಸಿ ಉಳಿದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ದೇವರಾಜ್ ಘೋಷಿಸಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಹೇಮಲಿಂಗೇಗೌಡ ಅವರು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಹಾಗೂ ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್, ರಾಂಪುರ ಶೇಖರಪ್ಪ ಅವರ ಮಾರ್ಗದರ್ಶನದಲ್ಲಿ ನಾವು ಸ್ಪಷ್ಟ ಬಹುಮತದಿಂದ ಗೆಲ್ಲಲು ಸಾಧ್ಯವಾಗಿದೆ.
ಈ ನಿಟ್ಟಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಬಾರಿಯಾಗಿದ್ದೇನೆ. ಸಂಘದ ಒಟ್ಟು 12 ಸ್ಥಾನಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯ 10 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಯಳವಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಷಯ. ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಿರ್ದೇಶಕರಾದ ಸಿದ್ದೇಗೌಡ, ಶಿವಮೂರ್ತಿ ರಂಗೇಗೌಡ, ನಿಂಗೇಗೌಡ, ಎ.ಎಸ್. ಲತಾ, ತಿಮ್ಮಪ್ಪ, ನಂಜುಂಡನಾಯಕ, ಜಿ. ಎಸ್. ನಿಂಗರಾಜ್ ಹಾಗೂ ಮುಖಂಡರಾದ ವಸಂತಗೌಡ (ವಾಸು), ಜವರೆಗೌಡ ತಿರುಪತಿಹಳ್ಳಿ, ಜಾನಪ್ಪ ಗೀಜಿಹಳ್ಳಿ, ಬಿ. ಎನ್. ಸೋಮೇಗೌಡ, ಚಂದ್ರಶೇಖರ್, ಶೇಖರ್, ರಂಗನಾಯಕ, ಪೂಜಾರು ಸ್ವಾಮಣ್ಣ ಇತರರಿದ್ದರು.